ಇತ್ತೀಚಿನ ಸುದ್ದಿ
ಮಕ್ಕಳಿದ್ದೇ ಮುಚ್ಚಿದ 5 ದಶಕಗಳ ಇತಿಹಾಸವಿರುವ ಕನ್ನಡ ಶಾಲೆ!: ಹಾಗಾದರೆ ಬಾಗಿಲು ಹಾಕಲು ಕಾರಣ ಏನು?
20/07/2023, 12:49

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಅದೊಂದು ಐದು ದಶಕಗಳ ಇತಿಹಾಸವಿರುವ ಶಾಲೆ. ಅದು ಬರೀ ಶಾಲೆಯಲ್ಲ, ಕನ್ನಡದ ದೇಗುಲ. ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿದ್ದ ಕಾಲದಲ್ಲಿ ಉಳಿದಿದ್ದ ಸರಕಾರಿ ಅನುದಾನಿತ ಶಾಲೆ. ಕನ್ನಡ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಿದರೆ ಇದು ಮಕ್ಕಳಿದ್ದೇ ಮುಚ್ಚಿ ಹೋಗಿದೆ. ಹಾಗಾದರೆ ಇದು ಎಲ್ಲಿಯ ಶಾಲೆ? ಯಾವ ಊರು? ಏನು ಕತೆ? ನೋಡೋಣ.
ಇದು ಮಂಗಳೂರಿನ ಪಡೀಲ್ ಸಮೀಪದ ಕರ್ಮಾರ್ ಬಳಿಯ ಆದರ್ಶ ಅನುದಾನಿತ ವಿದ್ಯಾನಿಲಯ ಶಾಲೆಯ ಕರುಣಾಜನಕ ವಾಸ್ತವ ಕತೆ.
ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶಾಲೆ ಬಾಗಿಲು ಇದೀಗ ಮುಚ್ಚಿದೆ.
ಕನ್ನಡ ಉಳಿಸಿ ಎಂದು ಬೊಬ್ಬೆ ಹಾಕುವ ಕನ್ನಡ ಸಂಘಟನೆಗಳು ಶಾಲೆಯನ್ನು ಉಳಿಸಲು ಮುಂದೆ ಬಂದಿಲ್ಲ. ಕನ್ನಡ ಮಾಧ್ಯಮ ಶಾಲೆಗಳು ನಶಿಸುತ್ತಿದ್ದರೂ ಶಿಕ್ಷಣ ಇಲಾಖೆಯಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ಇತ್ತ ಕಣ್ಣು ಹಾಯಿಸಿಲ್ಲ. ಯುವಕ, ಯುವತಿ ಮಂಡಲಕ್ಕೆ ಜಾಗ ಒದಗಿಸುವ ಸರಕಾರ ಅನುದಾನಿತ ಶಾಲೆಗೆ ಜಾಗ ಒದಗಿಸುವ ಔದಾರ್ಯ ತೋರಿಸಲಿಲ್ಲ. ಜಾಗದ ಸಮಸ್ಯೆಯಿಂದಲೇ ಸಾಕಷ್ಟು ವಿದ್ಯಾರ್ಥಿ ಗಳಿದ್ದರೂ ಶಾಲೆಯನ್ನು ಮುಚ್ಚಬೇಕಾಯಿತು. ವಿಶೇಷವೆಂದರೆ, ಈ ಶಾಲೆಯಿಂದಲೇ ನಡೆಯುವ
ಅಂಗವಾಡಿಗೆ 2 ಸೆನ್ಸ್ ಕೇಳಿದರೂ ಜಾಗವನ್ನು ಸರಕಾರ ಒದಗಿಸಿಲ್ಲ.ಅಂಗನವಾಡಿ ಕೇಂದ್ರಕ್ಕೆ ಬಾಡಿಗೆ ಮನೆ ಹುಡುಕಾಟ ನಡೆಯುತ್ತಿದೆ. ಶಾಲೆಯನ್ನು ಉಳಿಸಲು ಅನೇಕ ವರ್ಷಗಳ ಕಾಲ ಜಾಗಕ್ಕಾಗಿ ಕೋರ್ಟ್, ಕಚೇರಿಗೆ ಓಡಾಡಿದ ಜಯಾನಂದ ದೇವಾಡಿಗರು ಅನಂತರದಲ್ಲಿ ಕೋರ್ಟ್ ಗೆ ಹಾಜರಾಗದೆ, ಆಡಳಿತ ಮಂಡಳಿ ಬೇಜವಾಬ್ದಾರಿ. ಇದೀಗ ಊರ ಸುತ್ತ ಮುತ್ತಲಿನ ನಿವಾಸಿಗಳ ಮಕ್ಕಳಿಗೆ ಶಾಲೆ ಇಲ್ಲದಂತಾಗಿದೆ. 45 ವಿದ್ಯಾರ್ಥಿಗಳ ಪಕ್ಕದ ಶಾಲೆಗಳಿಗೆ ವರ್ಗಯಿಸಲಾಗಿದೆ. ಸಂಘ ಸಂಸ್ಥೆಗಳಿಗೆ ಮನಸ್ಸು ಮಾಡಿದ್ದರೆ ಶಾಲೆ ಉಳಿಸ ಬಹುದಿತ್ತು ಎಂದು ನಾಗರಿಕರು ಹೇಳುತ್ತಾರೆ. ಉನ್ನತ ಹುದ್ದೆಯಲ್ಲಿರುವ ಹಳೆ ವಿದ್ಯಾರ್ಥಿಗಳಿಗೂ ಶಾಲೆ ಉಳಿಸಲಾಗಲಿಲ್ಲ.
1970ರಲ್ಲಿ ಆದರ್ಶ ಅನುದಾನಿತ ಕನ್ನಡ ಶಾಲೆ ಆರಂಭವಾಗಿತ್ತು. ಅಂಗನವಾಡಿಯಿಂದ ಆರಂಭಗೊಂಡು ಹೈಸ್ಕೂಲಿನವರೆಗೆ ಇಲ್ಲಿ ತರಗತಿ ಇತ್ತು. ಕಳೆದ ವರ್ಷ ಹೈಸ್ಕೂಲ್ ಮುಚ್ಚಿ ಪ್ರೈಮರಿ ಮಾತ್ರ ನಡೆಸಲಾಗುತ್ತಿತ್ತು. ಮಕ್ಕಳ ದಾಖಲಾತಿ ಕಡಿಮೆಯಾಗಿದೆ, ಕಟ್ಟಡ ರಿಪೇರಿಗೆ ಬಂದಿದೆ ಎಂದು ಇಲಾಖೆ ಮಾಹಿತಿ ನೀಡಿತ್ತು. ಕನಿಷ್ಠ ಪ್ರೈಮರಿ ಶಾಲೆಯನ್ನಾದರೂ ಉಳಿಸಬಹುದಿತ್ತು. ಇದೀಗ ಶಾಲೆಯ ಪೀಠೋಪಕರಣ ಗಳನ್ನು ದ.ಕ. ಜಿಲ್ಲೆಯ 10 ಶಾಲೆಗಳಿಗೆ ಹಸ್ತಾಂತರಿಸುವ ಕಾರ್ಯ ನಡೆಯುತ್ತಿದೆ. ಶಾಲೆಗಾಗಿ ಸುತ್ತ ಮುತ್ತ ಸ್ವಲ್ಪ ಜಾಗವು ಸಿಗಲಿಲ್ಲವೇ ಎಂದು ಶಾಲಾಭಿಮಾನಿಗಳ ಹಾಗೂ ನಿವೃತ್ತ ಶಿಕ್ಷಕರ ನೋವಿನಿಂದ ಹೇಳುತ್ತಾರೆ.
ಒಂದು ಕಾಲದಲ್ಲಿ ಒಂದು ತರಗತಿಯಲ್ಲಿ ಕೂರಲಾಗದಷ್ಟು ಮಕ್ಕಳ ದಾಖಲಾತಿ ಇದ್ದ ಶಾಲೆ ಇದಾಗಿತ್ತು. ಕಳೆದ ವರ್ಷವೂ 45 ಮಂದಿ ಮಕ್ಕಳಿದ್ದರು. ಪ್ರಸ್ತುತ ಸಾಲಿನಲ್ಲೂ 45 ಮಂದಿ ಮಕ್ಕಳಿದ್ದರು. ಅದೆಷ್ಟೋ ಬಡ ಮಕ್ಕಳಿಗೆ ವರದಾನವಾಗಿತ್ತು ಎನ್ನುವುದು ಗೋಡೆ ಬರಹದಷ್ಟೇ ಸ್ಪಷ್ಟ.
ನಮ್ಮ ಮಕ್ಕಳು ಇದೇ ಶಾಲೆಯಲ್ಲಿ ಆಟ ಪಾಠ ಕಲಿತು, ಒಳ್ಳೆಯ ಉದ್ಯೋಗ ಗಿಟ್ಟಿಸಿ, ಸುಖ ಜೀವನ ನಡೆಸುತ್ತಿದ್ದಾರೆ.
ಆದರೆ ಅದೇ ಶಾಲೆ ಮುಚ್ಚಿದ್ದು ತುಂಬಾ ನೋವುಂಟು ಮಾಡಿದೆ. ಶಾಲೆಗೆ ಪಕ್ಕದಲ್ಲೇ ಜಾಗ ಒದಗಿಸಿ ಮರು ಆರಂಭ ಮಾಡಿ ಕನ್ನಡ ಮಾಧ್ಯಮ ಉಳಿಸಬೇಕಾಗಿದೆ ಎಂದು ಹಳೆ ವಿದ್ಯಾರ್ಥಿ ಪೋಷಕರಾದ ವಸಂತಿ ಹೇಳುತ್ತಾರೆ.
ಶಾಸಕರು, ಕಾರ್ಪೋರೇಟರ್ ಗಳಿಗೆ ನಮ್ಮ ಊರಿನ ಇತಿಹಾಸ ಉಳ್ಳ ಶಾಲೆ ಉಳಿಸಲಾಗಲಿಲ್ಲ ಎಂದರೆ ಬೇಸರದ ಸಂಗತಿ. ಪಕ್ಕದಲ್ಲೇ ಜಾಗ ವ್ಯವಸ್ಥೆ ಮಾಡಿ ನೆರೆಯ ಮಕ್ಕಳಿಗೆ ಬೆಳಕಾಗಬೇಕು ಎಂದು ಸ್ಥಳೀಯರಾದ ಲೋಕೇಶ್ ಅಭಿಪ್ರಾಯಪಡುತ್ತಾರೆ.