8:58 PM Thursday21 - November 2024
ಬ್ರೇಕಿಂಗ್ ನ್ಯೂಸ್
ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್… ಮೂವರು ಯುವತಿಯರ ಸಾವಿಗೆ ಕಾರಣವಾದ ಸೋಮೇಶ್ವರ ಬೀಚ್ ರೆಸಾಟ್೯ಗೆ ಬೀಗಮುದ್ರೆ ಬಂಟ್ವಾಳ ಸಮೀಪದ ಗಡಿಯಾರದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು: ಮನೆಯಂಗಳದಲ್ಲಿ ನಿಂತಿದ್ದ ವೇಳೆ… ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಸಡಗರ -ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿದ ಚಿಕ್ಕ… ಸಹಕಾರಿ ಕ್ಷೇತ್ರ ಜಾತಿ, ಪಕ್ಷಗಳ ಆಧಾರದಲ್ಲಿ ಕಾರ್ಯ ನಿರ್ವಹಿಸಬಾರದು: ಮಂಗಳೂರಿನಲ್ಲಿ ಸಚಿವ ಕೆ.ಎನ್.… ಉತ್ತರ ಪ್ರದೇಶ: ಝಾನ್ಸಿ ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅಪಘಾತ; ಕನಿಷ್ಠ 10 ನವಜಾತ… ಚಾರ್ಮಾಡಿ ಘಾಟ್‌ ರಸ್ತೆಗೆ 343.74 ಕೋಟಿ ಬಿಡುಗಡೆ: ಅಭಿವೃದ್ಧಿ ಹೆಸರಿನಲ್ಲಿ 10 ವರ್ಷ… ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ: ನ. 17ರಂದು ಚಿಕ್ಕಜಾತ್ರಾ ಮಹೋತ್ಸವ, 19ರಂದು ತೆಪ್ಪೋತ್ಸವ

ಇತ್ತೀಚಿನ ಸುದ್ದಿ

ಮಕ್ಕಳ ಹಠಮಾರಿತನಕ್ಕೆ ಏನು ಕಾರಣ?:  ಎಳೆಯರನ್ನು ಇದರಿಂದ ಮುಕ್ತಿ ಮಾಡಲು ಏನು ಮಾಡಬೇಕು?

06/01/2022, 21:44

ಪ್ರತಿದಿನ ಫಿಸಿಯೋಥೆರಪಿ ಕೇಂದ್ರಕ್ಕೆ ಬರುತ್ತಿದ್ದ ಜಯಾಳ  ಜೊತೆ ಅಂದು ಆಕೆಯ  ಮಗ ರಿಹಾನ್ ಕೂಡಾ  ಬಂದಿದ್ದ…. ಬರುವ ದಾರಿಯಲ್ಲಿ ಸಾಲುಸಾಲು ಅಂಗಡಿಗಳು ಅವನ ಕಣ್ಣಿಗೆ ಬಿದ್ದಿತ್ತು.. ಹಾಗೆ ಒಂದು ಅಂಗಡಿಯ ಮುಂದೆ ಬಂದವನೇ ಅಮ್ಮನೊಂದಿಗೆ ತಿಂಡಿಗಾಗಿ ನೂರು ರೂಪಾಯಿಯನ್ನು ಕೇಳಿದ.. ಆದರೆ ಅಮ್ಮ ಕೊಡಲು ಒಪ್ಪಲಿಲ್ಲ ..ಹತ್ತು ರೂಪಾಯಿ ಕೊಟ್ಟಾಗ ಅದನ್ನು ತೆಗೆದುಕೊಳ್ಳದೆ ನೂರು  ರೂಪಾಯಿಗಾಗಿ ತಾಯಿಯನ್ನು ಪೀಡಿಸಲು ಪ್ರಾರಂಭ ಮಾಡಿದ.. ಅಮ್ಮ ದುಡ್ಡು ಕೊಡದೆ ಇದ್ದಾಗ ಅಲ್ಲೇ ರಸ್ತೆ ಬದಿಯಲ್ಲಿ ಅಂಗಡಿ ಎದುರು ಜೋರಾಗಿ ಅಳುತ್ತಾ ನೆಲದಲ್ಲಿ ಹೊರಳಾಡಲು  ಪ್ರಾರಂಭ ಮಾಡಿದ… ಅಮ್ಮ ಇದು ಯಾವುದಕ್ಕೂ ಜಗ್ಗದೆ ಮುಂದೆ ಹೋದಾಗ ಅಲ್ಲಿದ್ದ ಕಲ್ಲನ್ನು ಬೆನ್ನಿನ ಮೇಲೆ ಎಸೆದೇ  ಬಿಟ್ಟ….ಕೊನೆಗೆ ತನ್ನ ನೋವನ್ನು ತಡೆದುಕೊಳ್ಳುತ್ತಾ ರಸ್ತೆಬದಿಯಲ್ಲಿ  ತನ್ನ ಮಗನ ರಂಪಾಟವನ್ನು ನೋಡಲಾಗದೆ ಜಯಾ  ನೂರು ರೂಪಾಯಿಯನ್ನು ಕೊಟ್ಟೇಬಿಟ್ಟಳು… ಅಷ್ಟಕ್ಕೆ ಅವನ ರಂಪಾಟ  ಮಂಗ ಮಾಯವಾಗಿಬಿಟ್ಟಿತು….ಆಕೆಯ ಜೊತೆ ವಿಚಾರಿಸಿದಾಗ ಅವನು ಶಾಲೆಗೆ ಹೋಗಬೇಕಾದರೂ ಇದೇ ರೀತಿ ಹಠ ಮಾಡುತ್ತಾನೆ ಎಂಬುದು ತಿಳಿಯಿತು ….

ಈ ರೀತಿಯ ಹಠ ಸ್ವಭಾವದ ಮಕ್ಕಳು ಹೆಚ್ಚಿನ ಮನೆಯಲ್ಲಿ ಕಾಣಸಿಗಬಹುದು. ಚಿಕ್ಕ ಚಿಕ್ಕ ವಿಷಯಗಳಿಗೆ ಹಠ ಮಾಡುವುದು ಸಾಮಾನ್ಯವಾಗಿರುತ್ತದೆ. ಸೈಕಲ್ ಗಾಗಿ ,ಹೊಸ ಬಟ್ಟೆ, ಆಟಿಕೆ ,ಬ್ಯಾಗ್, ಚಾಕಲೇಟ್ ಹೀಗೆ ಹಲವು ವಿಚಾರಗಳಿಗೆ ಮಕ್ಕಳು ಮನೆಯಲ್ಲಿ ತಂದೆ ತಾಯಿಯರ ಜೊತೆ ಮೊಂಡು ತನ  ಮಾಡುವಂತದ್ದು ಸಾಮಾನ್ಯವಾಗಿರುತ್ತದೆ. ತಂದೆ ತಾಯಿಗೆ ಮಕ್ಕಳ ಮೊಂಡುತನ, ಹಠಮಾರಿತನವನ್ನು ಸರಿಪಡಿಸುವುದು ಬಿಡಿಸಲಾರದ ಕಗ್ಗಂಟಾಗಿರುತ್ತದೆ…

ಕೆಲವೊಂದು ಸಲ ಈ  ಹಠ ಸ್ವಭಾವ ವಯಸ್ಕರಾಗುವವರೆಗೆ ಮುಂದುವರಿದು ಹಲವಾರು ತೊಂದರೆಗಳು ಆದಂತಹ ಉದಾಹರಣೆಗಳು ಇವೆ.. ದುರ್ಯೋಧನನ ಹಠದಿಂದಾಗಿ ಮಹಾಭಾರತ ಯುದ್ಧ ನಡೆದು ಸರ್ವನಾಶ ವಾದದ್ದು ನಮಗೆಲ್ಲ ತಿಳಿದಿರುವ ವಿಷಯವೇ ಆಗಿದೆ..

ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಏಳೆಂಟು ಮಕ್ಕಳನ್ನು ಒಬ್ಬಳು ತಾಯಿ  ನೋಡಿಕೊಳ್ಳುತ್ತಿದ್ದಳು. ಅವಿಭಕ್ತ ಕುಟುಂಬದಲ್ಲಿ  ಅಜ್ಜ-ಅಜ್ಜಿ ಚಿಕ್ಕಪ್ಪ ದೊಡ್ಡಪ್ಪ , ಹೀಗೆ ಹಿರಿಯರ ಮಾತಿಗೆ ಮಕ್ಕಳು ಬೆಲೆಯನ್ನು ನೀಡುವ ಮೂಲಕ ಕುಟುಂಬದಲ್ಲಿ ಹೊಂದಾಣಿಕೆಯಿಂದ ಬಾಳುತ್ತಿದ್ದರು. ಹಿರಿಯರ ಮಾತು ಕೂಡಾ  ಮಕ್ಕಳ ಮನಸ್ಸಿಗೆ ನಾಟುವಂತೆ ಇರುತಿತ್ತು…. ಇದರಿಂದ ಮಕ್ಕಳಲ್ಲಿ ಸಹಬಾಳ್ವೆ  ಸ್ವಭಾವ ಹೆಚ್ಚಾಗಿ ಇರುತ್ತಿತ್ತು…ಈಗ ಒಂದು ಮಗುವನ್ನು ನೋಡಿಕೊಳ್ಳಲು, ಸಮಾಧಾನ ಮಾಡಲು ಏಳೆಂಟು ಮಂದಿ ಇರಬೇಕಾದ ಪರಿಸ್ಥಿತಿಯಾಗಿದೆ ..

ಹಾಗಾದರೆ ಮಕ್ಕಳಲ್ಲಿ ಈ ರೀತಿಯ ಬದಲಾವಣೆಗೆ ಕಾರಣವೇನು?? 

ಈಗಿನ ವಿಭಕ್ತ ಕುಟುಂಬದಲ್ಲಿ ಎಲ್ಲರಿಗೂ ಒಂದು ತಪ್ಪಿದಲ್ಲಿ ಎರಡು ಮಕ್ಕಳು ಇರುವ ವ್ಯವಸ್ಥೆಯಿದೆ.. ನಮ್ಮ ಮಕ್ಕಳು ಚೆನ್ನಾಗಿರಬೇಕು.. ನಾವು ಪಟ್ಟ ಕಷ್ಟವನ್ನು ಅವರು ಅನುಭವಿಸಬಾರದು ಎಂಬ ತುಡಿತ ಹೆತ್ತವರಲ್ಲಿ ಹೆಚ್ಚಾಗಿರುತ್ತದೆ.. ನಮ್ಮ ಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ದೂರದೃಷ್ಟಿ ಹೆತ್ತವರಲ್ಲಿ ಜಾಸ್ತಿಯಾಗಿರುತ್ತದೆ.. ಜೊತೆಗೆ ಒಂದು ಅಥವಾ ಎರಡು ಮಕ್ಕಳು ಇರುವಾಗ ಹೆತ್ತವರಿಗೆ ಮಕ್ಕಳಲ್ಲಿ ಅತಿಯಾದ ಪ್ರೀತಿಯಿರುತ್ತದೆ ನಮಗೆ ಇರುವ ಒಂದು ಮಗುವಿಗೆ ಎಲ್ಲವನ್ನು ಪೂರೈಸಬೇಕೆಂಬ ಹೆತ್ತವರ ತುಡಿತ ಜಾಸ್ತಿ ಇರುತ್ತದೆ..

ಆದ್ದರಿಂದ ಮಗು ಸಣ್ಣ ವಯಸ್ಸಿನಲ್ಲಿರುವಾಗಲೇ ಕೇಳಿದ್ದನ್ನು ತಕ್ಷಣವೇ ತಂದೆ-ತಾಯಿ ಪೂರೈಕೆ ಮಾಡಿ ಬಿಡುತ್ತಾರೆ .ಮೊದಲಿಗೆ ಚಿಕ್ಕ, ಚಿಕ್ಕ ವಸ್ತುವಿಗೆ ಬೇಡಿಕೆ ಇಟ್ಟಂತಹ ಮಗು ಸ್ವಲ್ಪ ದೊಡ್ಡದಾಗುತ್ತಿದ್ದಂತೆ ದೊಡ್ಡ ದೊಡ್ಡ ವಿಚಾರಗಳ ಬೇಡಿಕೆ ತಂದೆತಾಯಿಯ ಮುಂದೆ ನಿಂತುಕೊಳ್ಳುತ್ತದೆ.. ಯಾವಾಗ ತನ್ನ ಬೇಡಿಕೆ ಪೂರೈಕೆ ಆಗುವುದಿಲ್ಲವೋ ಆಗ  ಮಗು ಅಳುವುದು , ಹಠ ಮಾಡುವುದು, ತನಗೆ ಸಿಗಲೇಬೇಕೆಂಬ ಮನೋಧೋರಣೆಯನ್ನು ಬೆಳೆಸಿಕೊಳ್ಳಲು ಪ್ರಾರಂಭ ಮಾಡುತ್ತದೆ. ಚಿಕ್ಕದಾಗಿ ಪ್ರಾರಂಭವಾದ ಹಠ ದೊಡ್ಡದಾಗಿ ಬೆಳೆಯುತ್ತದೆ. ಮುಂದೆ ಇದು ಇನ್ಯಾವುದೋ ವಿಪರ್ಯಾಸಕ್ಕೆ ನಾಂದಿಯಾಗಬಹುದು. ಹೆತ್ತವರ ಅತಿಯಾದ ಪ್ರೀತಿ,  ಕಷ್ಟದ ಅರಿವಿಲ್ಲದಿರುವುದು, ಕಾಯುವ ತಾಳ್ಮೆ ಇಲ್ಲದಿರುವಿಕೆ, ವಸ್ತುವಿನ ಮೌಲ್ಯದ ಅರಿವಿಲ್ಲದಿರುವುದು, ಮಕ್ಕಳ ಮೊಂಡುತನಕ್ಕೆ ಮುಖ್ಯ ಕಾರಣವಾಗಿದೆ.

“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ “ಎಂಬ ಗಾದೆ ಮಾತಿನಂತೆ ಮಕ್ಕಳು ಸಣ್ಣ ವಯಸ್ಸಿನಲ್ಲಿರುವಾಗಲೇ ಅವರಿಗೆ ಸಹನೆ, ತಾಳ್ಮೆ , ಹೊಂದಾಣಿಕೆ, ಸಹಬಾಳ್ವೆ , ಕಾಯುವಿಕೆ ,ಕಷ್ಟದ ಅರಿವು.. ಹಣದ ಮೌಲ್ಯದ ತಿಳುವಳಿಕೆಯನ್ನು ಮೂಡಿಸಿದರೆ ಮಕ್ಕಳಲ್ಲಿ ಹಠಮಾರಿತನವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಹುದು 

 ಎಂಬುದೇ ನಮ್ಮ ಆಶಯ……

✍️

ಇತ್ತೀಚಿನ ಸುದ್ದಿ

ಜಾಹೀರಾತು