ಇತ್ತೀಚಿನ ಸುದ್ದಿ
ಮಹಿಳೆಯರನ್ನು ಕಾಡುವ ಆರೋಗ್ಯ ಸಮಸ್ಯೆಗಳೇನು?: ಮೆನೋಪಾಸ್ ಬಗ್ಗೆ ನಿಮಗೆಷ್ಟು ಗೊತ್ತು?
05/03/2022, 10:43
ಕುಟುಂಬ ಹಾಗೂ ವೃತ್ತಿ ಜೀವನದ ನಿರ್ವಹಣೆಯ ಜಂಜಾಟದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಕಡಿಮೆ ಆದ್ಯತೆ ಕೊಡುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಆಟ -ಊಟೋಪಚಾರಗಳ ಬಗ್ಗೆಯೇ ಹೆಚ್ಚಾಗಿ ಗಮನ ಕೊಟ್ಟು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತುಬಿಡುತ್ತಾರೆ. ಆಧುನಿಕ ಜೀವನಶೈಲಿಯ ಒತ್ತಡಯುಕ್ತ ಕೆಲಸದಿಂದಾಗಿ ಮಾನಸಿಕ ಹಾಗೂ ದೈಹಿಕ ಸ್ವಾಸ್ತ್ಯವನ್ನು ಕೆಡಿಸುತ್ತಿದೆ. ಹೀಗಿರುವಾಗ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯವಾಗಿದೆ.
ಸಾಮಾನ್ಯವಾಗಿ ಮಹಿಳೆಯನ್ನು ಬಾಧಿಸುವ ಅರೋಗ್ಯ ಸಮಸ್ಯೆಗಳಾದ ಮುಟ್ಟಿನ ಸಮಸ್ಯೆ,ಮೂಳೆಸವೆತ, ಹೃದ್ರೋಗ, ಮೆನೋಪಾಸ್ ತೊಂದರೆಗಳು, ಖಿನ್ನತೆ, ಸ್ತನ ಹಾಗು ಗರ್ಭಕೋಶ ಕ್ಯಾನ್ಸರ್, ರಕ್ತ ಹೀನತೆ.
ಅನಿಯಮಿತ ಮುಟ್ಟು : 20-30 ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅತಿಯಾದ ರಕ್ತಸ್ರಾವ, ಮುಟ್ಟಾಗದೇ ಇರುವುದು, PCOD, ಗರ್ಭಶಾಯದ ಗೆಡ್ಡೆ (Fibroid ) ಹೀಗೆ ಬೇರೆಬೇರೆ ಸಮಸ್ಯೆಗಳನ್ನು ನೋಡಬಹುದು.
ಮೂಳೆಸವೆತ : ಸಾಮಾನ್ಯವಾಗಿ 50ವರ್ಷ ದಾಟಿದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಭಾದಿಸುತ್ತದೆ. ವಯಸ್ಸು, ಹೊರ್ಮೋನ್ಗಳ ಏರುಪೇರು,ಕ್ಯಾಲ್ಸಿಯಂ ನ ಕೊರತೆ, ವಂಶವಾಹಿನಿಯಿಂದಾಗಿ ಈ ಸಮಸ್ಯೆ ಕಂಡು ಬರುತ್ತದೆ. ಇದರಿಂದಾಗಿ ಮೂಳೆ ತೆಲುವಾಗಿ ಸುಲಭವಾಗಿ ಮುರಿದುಹೋಗುವ ಸಂಭವವಿರುತ್ತದೆ ಹಾಗು ಗಂಟು ನೋವಿನಂತಹ ಸಮಸ್ಯೆಗಳು ಭಾದಿಸಬಹುದು. ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರ ಹಾಗು ಸೂರ್ಯನ ಎಲಳೆ ಬಿಸಿಲಿಗೆ ಮೈ ಒಡ್ದುವುದು ಒಳಿತು.
ಹೃದ್ರೋಗ :
ಮಹಿಳೆಯರಲ್ಲಿ ಕಂಡುಬರುವ ಇಸ್ಟ್ರೋಜನ್ ಹಾರ್ಮೋನ್ ಆಂಟಿಓಕ್ಸಿಡೆಂಟ್ ಗುಣಹೊಂದಿರುವುದರಿಂದ ಹೃದಯಾಘಾತದಿಂದ ಕಾಪಾಡುತ್ತದೆ. ಮೆನೋಪಾಸ್ ನ ನಂತರದ ದಿನದಲ್ಲಿ ಈ ಹೊರ್ಮೋನ್ನ ಕೊರತೆಯಿಂದಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚು.
ಖಿನ್ನತೆ :ಅತಿಯಾದ ಒತ್ತಡಯಾಕ್ತ ಜೀವನದಿಂದಾಗಿ ಪುರುಷರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಲ್ಲಿ ಖಿನ್ನತೆಗೆ ಒಳಗಾಗುತ್ತಿದ್ಧಾರೆ. ಹಲವರಿಗೆ ಹೆರಿಗೆಯ ನಂತರ ಖಿನ್ನತೆ ಕಂಡುಬರುತ್ತದೆ. ಹೊರ್ಮೋನ್ ಗಳ ವ್ಯತ್ಯಾಸ,ನರಮಂಡಲದಲ್ಲಿ ಉಂಟಾಗುವ ರಾಸಾಯಿನಿಕ ಬದಲಾವಣೆಯಿಂದಾಗಿ ಖಿನ್ನತೆ ಉಂಟಾಗಬಹುದು.
ಮೆನೋಪಾಸ್ ನ ತೊಂದರೆಗಳು : ಮುಟ್ಟು ನಿಲ್ಲುವುದು ಮಾತ್ರವಲ್ಲದೆ, ಮೈ ಬಿಸಿಯಾಗುವುದು ಮರುಕ್ಷಣ ಬೆವರುವುದು, ನಿದ್ರಾಹೀನತೆ, ಉರಿಮೂತ್ರ, ಚರ್ಮದ ಶುಷ್ಕತೆಯಿಂದಾಗಿ ತುರಿಕೆ, ಗಾಬರಿಯಾಗುವುದು, ಮೂಡ್ ಸ್ವಿಂಗ್ನಂತಹ ಲಕ್ಷಣಗಳನ್ನು ಕಾಣಬಹುದು.
ಸ್ತನ ಹಾಗು ಗರ್ಭ ಕೋಶದ ಕ್ಯಾನ್ಸರ್ : ವಂಶವಾಹಿನಿ, ವಯಸ್ಸು, ಕೌಟುಂಬಿಕ ಹಿನ್ನಲೆ, ಜೀವನಶೈಲಿಯಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. WHO ಪ್ರಕಾರ ಪ್ರತೀ ವರ್ಷ 2.1ಮಿಲಿಯನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ದಾಖಲಾಗುತ್ತಿದೆ. ಮಾಮೂಗ್ರಫಿಯ ಮೂಲಕ ಸ್ತನ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು.
ಗರ್ಭ ಕೋಶದ ಕ್ಯಾನ್ಸರ್ ಸಹ ಸಾಮಾನ್ಯವಾಗಿ ಕಂಡು ಬರುತ್ತದೆ. PAP smear ಟೆಸ್ಟ್ ಅನ್ನು ಮೂವತ್ತು ವರ್ಷ ಮೇಲ್ಪಟ್ಟ ಮಹಿಳೆಯರು 2-3 ವರ್ಷಕ್ಕೊಮ್ಮೆ ಮಾಡಿಕೊಳ್ಳುವುದು ಉತ್ತಮ.
ರಕ್ತ ಹೀನತೆ : ಹೆಚ್ಚಿನ ಮಹಿಳೆಯರು ತಮ್ಮ ಆಹಾರದ ಬಗ್ಗೆ ಗಮನ ಕೊಡದೆ ಅಪೌಷ್ಟಿಕ ಆಹಾರ ಕ್ರಮದಿಂದಾಗಿ ಹೆಚ್ಚಾಗಿ ಕಬ್ಬಿನಾಂಶ ಕೊರತೆಯಿಂದಾಗಿ ರಕ್ತ ಹೀನತೆ ಉಂಟಾಗುತ್ತದೆ. ಇದರಿಂದಾಗಿ ಆಯಾಸ, ಏಕಾಗ್ರತೆ ಕೊರತೆ, ಆಲಸ್ಯ, ಕೋಪ, ಉಸಿರಾಟದ ತೊಂದರೆ, ತಲೆಸುತ್ತು ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಗರ್ಭಿಣಿಯರ ಆರೋಗ್ಯ,ಮಗುವಿನ ಬೆಳವಣಿಗೆಗೆ ತೊಂದರೆಉಂಟಾಗುತ್ತದೆ. ಆದ್ದರಿಂದ ಹಸಿರು ತರಕಾರಿ, ಹಣ್ಣು, ನುಗ್ಗೆ ಸೊಪ್ಪು, ಕರಿ ಎಳ್ಳು, ಕ್ಯಾರೆಟ್ ನಂತಹ ಆಹಾರಗಳ ಸೇವನೆಯಿಂದ ರಕ್ತ ಹೀನತೆಯಿಂದ ಪಾರಾಗಬಹುದು.
ಈ ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳಿಂದ ದೂರ ಉಳಿಯಲು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡುವುದು ಅಗತ್ಯ. ಸಮಯಕ್ಕೆ ಸರಿಯಾಗಿ ಪೋಷಕಾಂಶ ಯುಕ್ತ ಆಹಾರ ಸೇವನೆ,ಪ್ರಾಣಯಾಮ, ವ್ಯಾಯಾಮ ಮಾಡುವುದರಿಂದ ದೈಹಿಕ ಹಾಗು ಮಾನಸಿಕ ಒತ್ತಡಗಳಿಗೆ ಸಿಲುಕದೇ ಚೈತನ್ಯಯುತ ಜೀವನ ನಡೆಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು.
ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ
📞8904316163