ಇತ್ತೀಚಿನ ಸುದ್ದಿ
ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ ಮಹಾಶಿವರಾತ್ರಿ ಸಂಭ್ರಮ: ಕಪಿಲೆಯಲ್ಲಿ ಮಿಂದ ಭಕ್ತ ಸಾಗರ
26/02/2025, 17:33

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಕಳೆಗಟ್ಟಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರ ದೇಗುಲದಲ್ಲಿ, ಮಹಾಶಿವರಾತ್ರಿ ನಿಮಿತ್ತ ಇಂದು ಮುಂಜಾನೆಯಿಂದ ಪೂಜಾ ಕೈಂಕರ್ಯಗಳು, ದೇವರಿಗೆ ಕ್ಷೀರಾಭೀಷೇಕ, ಫಲ ಪಂಚಾಮೃತಾಭಿಷೇಕ, ರುದ್ರಾಭಿಷೇಕಗಳು ನಡೆದಿವೆ.
ನಂಜುಂಡೇಶ್ವರನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದರಿಂದ, ಕೆಲ ಭಕ್ತರು ದೇವಸ್ಥಾನದ ಹೊರಭಾಗದಲ್ಲಿಯೇ ನಮಿಸಿ ಹೋಗುತ್ತಿದ್ದಾರೆ. ಕಪಿಲಾ ನದಿ ತೀರದಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರು ನಿಯೋಜಿಸಲಾಗಿದೆ. ನಂಜನಗೂಡಿನ ದೇವಸ್ಥಾನದ ಮುಂಭಾಗ ಶಿವರಾತ್ರಿಯ ಜಾಗರಣೆ ನಿಮಿತ್ತ ರಾತ್ರಿಯಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇಷ್ಟೇ ಅಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಜಮಾಯಿಸಿದ್ದು, ಶಿವನಿಗೆ ಉರುಳು ಸೇವೆ, ಬಿಲ್ವಪತ್ರೆ ಸಮರ್ಪಿಸಿ ಭಕ್ತಿ ಭಾವ ಸಮರ್ಪಿಸಿದ್ರು. ಈ ವೇಳೆ ದೇವಸ್ಥಾನ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್ ಮಾತನಾಡಿ, ಮಹಾಶಿವರಾತ್ರಿಯ ಪೂಜಾ ಕೈಂಕರ್ಯಗಳ ಬಗ್ಗೆ ವಿವರಿಸಿದರು. ಅದೇ ರೀತಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಮಾತನಾಡಿ, ಈ ಬಾರಿ ಪಾಸ್ ವ್ಯವಸ್ಥೆ ನಿಷೇಧಿಸಲಾಗಿದೆ ಎಂದು ತಿಳಿಸಿ ದೇವಸ್ಥಾನಕ್ಕಾಗಮಿಸುವ ಭಕ್ತರ ಹಿತಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮಹಾಶಿವರಾತ್ರಿಯ ಜಾಗರಣೆಯ ಅಂಗವಾಗಿ ರಾಜ್ಯದ ನಾನಾ ಮೂಲೆಗಳಿಂದ ಇಂದು ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ದೇವಾಲಯದ ಸುತ್ತಮುತ್ತ ಬೀಡು ಬಿಟ್ಟಿದ್ದಾರೆ.