ಇತ್ತೀಚಿನ ಸುದ್ದಿ
ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ ಬಂಧನ
11/11/2025, 11:26
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇಂದ್ರ ಸರಕಾರದ ಸ್ವಾಮ್ಯಕ್ಕೊಳಪಟ್ಟಿರುವ ಉದ್ದಿಮೆಯೊಂದರ ಅಂಗಸಂಸ್ಥೆಯ ಹೆಸರಿನಲ್ಲಿ ಸಾಲ ಕೊಡಿಸುವ ಆಮಿಷವೊಡ್ಡಿ ನಾಲ್ವರು ಮಹಿಳೆಯರಿಂದ ಒಟ್ಟು ರೂ. 139,232 ಹಣವನ್ನು ಪಡೆದು ವಂಚಿಸಿದ್ದ ಆರೋಪಿಯೋರ್ವ ಮಡಿಕೇರಿ ನಗರ ಪೊಲೀಸ್ ಠಾಣೆಯ ಪೊಲೀಸರು ಹೆಣೆದ ಬಲೆಗೆ ಬಿದ್ದು ಕಂಬಿ ಹಿಂದೆ ಬಿದ್ದು ಲಾಕ್ ಆಗಿದ್ದಾನೆ.
ಮಡಿಕೇರಿ ನಗರದ ಗುಂಡೂರಾವ್ ಬಡಾವಣೆ ನಿವಾಸಿ ಸಿ.ಆರ್. ವೆಂಕಟೇಶ್ (40) ಬಂಧಿತ ಆರೋಪಿಯಾಗಿದ್ದಾನೆ.
ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಐ.ಟಿ..ಐ. ಹಿಂಭಾಗದ ಇಂದುಮತಿ ಹಾಗೂ ಮಂಗಳಾದೇವಿ ನಗರದ ರೇಣುಕಾ, ರೇವತಿ, ಶುಭ ಎಂಬುವವರುಗಳೇ ಅತ್ತ ಸಾಲವೂ ಸಿಗದೆ ಇತ್ತ ಕೈಯಲ್ಲಿದ್ದ ಹಣವನ್ನು ಕಳೆದುಕೊಂಡು ವಂಚನೆಗೊಳಗಾದ ಮಹಿಳೆಯರಾಗಿದ್ದಾರೆ.
ಈ ಮಹಿಳೆಯರ ಬಳಿ ಅಪ್ಪು ಕುಶಾನಿ ಫೈನಾನ್ಸ್ ಪ್ರೈವೇಟ್ ಕಂಪನಿ ಲಿಮಿಟೆಡ್ ನ ಅರೋಪಿ ವೆಂಕಟೇಶ್ ಎಂಬಾತ ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ ಎಂಪ್ಲಾಯಿಸ್ ಕೋ – ಆಪರೇಟಿವ್ ಸೊಸೈಟಿ ಲಿಮಿಟೆಡ್ ಕೋಲ್ಕತ್ತಾ ಸಂಸ್ಥೆಯಿಂದ ರೂ. 10 ಲಕ್ಷ ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ಕೊಡಿಸುವುದಾಗಿ ನಂಬಿಸಿದ್ದಾನೆ. ಅವರಿಂದ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐ.ಡಿ. ಬ್ಯಾಂಕ್ ಪಾಸ್ ಬುಕ್, 3 ಫೋಟೋ ಹಾಗೂ 6 ಖಾಲಿ ಚೆಕ್ ಗಳನ್ನು ಇವರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಪಡೆದುಕೊಂಡಿದ್ದಾನೆ. ಅಲ್ಲದೇ ತಲಾ ಒಬ್ಬೊಬ್ಬರಿಂದ ರೂ. 7952 ನ್ನು ಕಂತುಗಳ ರೂಪದಲ್ಲಿ ರೂ. 31808 ಮತ್ತು ಪ್ರೊಸೆಸ್ಸಿಂಗ್ ಚಾರ್ಜ್ ರೂ. 3000 ರಂತೆ ಒಟ್ಟು ರೂ. 34808 ಹಣವನ್ನು ಪಡೆದುಕೊಂಡಿದ್ದಾನೆ. ಹೀಗೇ ನಾಲ್ವರು ಮಹಿಳೆಯರಿಂದ ಒಟ್ಟು 1,39,232 ರೂ. ಸಂಗ್ರಹಿಸಿದ್ದ.ಆದರೆ ತದನಂತರ ಸಾಲವನ್ನು ಕೊಡಿಸಲಿಲ್ಲ ಮತ್ತು ತಾನು ಪಡೆದುಕೊಂಡ ಹಣವನ್ನು ಹಿಂತಿರುಗಿಸದೇ ಮಕ್ಮಲ್ ಟೋಪಿ ಹಾಕಿದ್ದಾನೆ. ಈತನಿಂದ ತಾವು ಮೋಸಹೋಗಿರುವುದನ್ನು ಅರಿತ ಈ ಮಹಿಳೆಯರು ಆರೋಪಿ ವೆಂಕಟೇಶನ ವಿರುದ್ಧ ದಿನಾಂಕ ನವೆಂಬರ್ 6 ರಂದು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಕುರಿತು ತನಿಖೆ ಕೈಗೊಂಡ ಮಡಿಕೇರಿ ಉಪ ವಿಭಾಗ ಡಿ.ಎಸ್.ಪಿ ಸೂರಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜು, ಸಬ್ ಇನ್ಸ್ ಪೆಕ್ಟರ್ ಗಳಾದ ಅನ್ನಪೂರ್ಣ ಮತ್ತು ರಾಧ ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳು ಮತ್ತು ತಾಂತ್ರಿಕ ಸಿಬ್ಬಂದಿಗಳು ಮಾಹಿತಿ ಸಂಗ್ರಹಿಸಿ ನವೆಂಬರ್ 10 ರಂದು ಆರೋಪಿ ವೆಂಕಟೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.













