11:37 AM Thursday16 - January 2025
ಬ್ರೇಕಿಂಗ್ ನ್ಯೂಸ್
ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ…

ಇತ್ತೀಚಿನ ಸುದ್ದಿ

ಲಾಕ್‌ಡೌನ್‌: ಉಡುಪಿಯಲ್ಲಿ ಹಸಿದ ಬೀದಿ ನಾಯಿಗಳಿಗೆ ನಿತ್ಯ ಅನ್ನದಾಸೋಹ!

02/06/2021, 18:13

ಉಡುಪಿ(reporterkarnataka news):

ದಿನನಿತ್ಯದ ಆತಂಕರಹಿತ ಜೀವನ ಶೈಲಿಯಲ್ಲಿ ತೊಡಗಿಸಿಕೊಂಡಿದ್ದ ಮನುಷ್ಯನಿಗೆ 2019 ರಲ್ಲಿ ಧುತ್ತೆಂದು ವಕ್ಕರಿಸಿದ ಕೊರೊನಾ ವೈರಸ್ ದೊಡ್ಡ ಶಾಕ್ ನೀಡಿದೆ. ಕೊರೊನಾ ಎಂಬ ಮಹಾಮಾರಿ ನಾವೆಂದೂ ಊಹಿಸಿರದ ನಮ್ಮ ಜೀವನದ ಸಂಪೂರ್ಣ ಶೈಲಿಯನ್ನೇ ಬದಲಾಯಿಸಿದೆ. ಸದಾ ಚಟುವಟಿಕೆಯಿಂದ, ಆಸಕ್ತಿಯಿಂದ, ಹೊಸ ವಿಚಾರಗಳ ಕಡೆ ಹೊಸ – ಹೊಸ ಅನ್ವೇಷಣೆಗಳ ಕಡೆಗೆ ಹೊರಟ ನಮ್ಮ ಪಯಣಕ್ಕೆ ಈಗ ಬ್ರೇಕ್ ಬಿದ್ದಿದೆ, ಕಣ್ಣಿಗೆ ಕಾಣದ ಈ ಸೂಕ್ಷ್ಮಾಣು ವೈರಸ್ ಮನುಷ್ಯನ ದೇಹವನ್ನು ಹೊಕ್ಕು ಆತನ ಹೃದಯ ಬಡಿತವನ್ನು ನಿಲ್ಲಿಸಿ ಸಾವಿನೆಡೆಗೆ ಕರೆದೊಯ್ಯುತ್ತಿದೆ.

ಈ ರೋಗದಿಂದ ಜನರನ್ನು ಮುಕ್ತರನ್ನಾಗಿ ಮಾಡಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ, ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ, ಜನರಿಗೆ ಮನೆಯಲ್ಲಿಯೇ ಸುರಕ್ಷಿತವಾಗಿರುವಂತೆ ತಿಳಿಸಿ, ಅವರ ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಿದೆ. ಆದರೆ ಈ ಕ್ರಮ ಅನಿವಾರ್ಯವಾದರೂ, ಸಂಪೂರ್ಣವಾಗಿ ಒಳ್ಳೆಯ ಬೆಳವಣಿಗೆ ಅಲ್ಲ, ಏಕೆಂದರೆ ದಿನಗೂಲಿ ಮಾಡಿ ಅಂದಿನ ದುಡಿಮೆಯಿಂದ ಅಂದು ಜೀವನ ನಡೆಸುತ್ತಿರುವ ಅದೆಷ್ಟೋ ಬಡಜನರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇಂತಹ ಕಷ್ಟದ ಸಂದರ್ಭದಲ್ಲಿ ಉಳ್ಳವರು ಇಲ್ಲದವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ, ಜಾತಿ ಧರ್ಮಗಳ ಸಂಕೋಲೆಯಿಂದ ಹೊರಬಂದು ಅನೇಕ ಮಠ-ಮಾನ್ಯಗಳು ಬಡಜನರಿಗೆ ತಮ್ಮಿಂದಾದ ಸಹಾಯ ಮಾಡುತ್ತಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಸಹಾಯ ಮಾಡುತ್ತಿವೆ. ಬಡ ಜನರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ, ಆಸ್ಪತ್ರೆಯ ಬಿಲ್ಲುಗಳನ್ನು ಕಟ್ಟುತ್ತಿದ್ದಾರೆ. ಇದರಿಂದಾಗಿ ತಮ್ಮ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಸಾಮಾನ್ಯ ಜನರೂ ಸಹ ಸಹಕಾರ ನೀಡುತ್ತಿದ್ದಾರೆ.

ಆದರೇ ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ಮಾತನಾಡಲು ಬಾರದ ಮೂಕು ಪ್ರಾಣಿಗಳಾದ ಬೀದಿ ನಾಯಿಗಳು, ಆಕಳುಗಳು ದನಗಳು ಪಕ್ಷಿಗಳು ಅದರಲ್ಲೂ ವಿಶೇಷವಾಗಿ ನಿಯತ್ತಿಗೆ ಅನ್ವರ್ಥಕ ನಾಮವಾದ ಬೀದಿನಾಯಿಗಳ ಹಸಿವಿನ ಪಾಡನ್ನು ಕೇಳುವವರು ಯಾರು ? ಶ್ರೀಮಂತರ ಮನೆಯ ನಾಯಿಗಳೆನೋ ವೈಭವೋಪೇತ ಬದುಕು ಬಾಳುತ್ತವೆ. ಆದರೆ ಬಡ ಬೀದಿ ನಾಯಿಪಾಡು ಕೇಳುವವರು ಯಾರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಆದರೆ, ಅದೇನೋ ಹಿರಿಯರು ಹೇಳುತ್ತಾರಲ್ಲ ಈ ಭೂಮಿ ಮೇಲೆ ಜೀವಿಯನ್ನು ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂದು ಹಾಗೆ ಒಂದು ವಿಚಿತ್ರವಾದರೂ ಸಚಿತ್ರ ಘಟನೆಯ ಮೂಲಕ ಈ ಸಂಕಷ್ಟದ ಸ್ಥಿತಿಗೆ ಆ ದೈವವೋ ಅಥವಾ ಸುಕೃತ ಮನಸ್ಸುಗಳ ಸಂಕಲ್ಪವೋ ಎನ್ನುವಂತೆ ಪರಿಹಾರ ಕಾಣುತ್ತಿದೆ. ಅಂತಹ ಸಚಿತ್ರ ಘಟನೆಯ ಹಿನ್ನೆಲೆ ಏನೆಂದರೆ, ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಣೆಯಾದಾಗ, ಈ ಕೊರೊನಾ ಸಂಕಷ್ಟದ ಕಾಲದಲ್ಲಿ ಬಡ ಹಸಿದ ಮನುಷ್ಯರಿಗೆ ಊಟ ನೀಡುವ ಸುಕೃತ ಕಾರ್ಯವೆಸಗಲು ತೀರ್ಮಾನಿಸಿದ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅನಂತ ಇನ್ನಂಜೆ ಅವರು ತಮ್ಮ 10 ಜನ ಗೆಳೆಯರ  ಹಾಗು ಸಮಾನ ಮನಸ್ಕರೊಂದಿಗೆ ಜೊತೆಗೂಡಿ “Feed  A stray Dog Feed The voiceless Just @ ₹20 ” ಎನ್ನುವ ಸಂಕಲ್ಪದೊಂದಿಗೆ ಕ್ರಿಯಾಶೀಲವಾಗಿ ಮತ್ತು ಸೃಜನಶೀಲವಾಗಿ ಯೋಚಿಸಿ ಚರ್ಚಿಸಿ  ಬೀದಿ ನಾಯಿಗಳ ಹಸಿವು ನೀಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಜನರ ಸಹಕಾರದೊಂದಿಗೆ ಉಡುಪಿಯಲ್ಲಿ ಪ್ರತಿದಿನ 200 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.

ಹಸ್ತಪ್ರದ ಟ್ರಸ್ಟ್ ನ ಸದಸ್ಯರು ಬರುವುದನ್ನು ಬಹು ದೂರದಿಂದಲೇ ಗುರ್ತಿಸಿ ಬಾಲ ಹೊರಳಿಸಿ ನಾಯಿಗಳು ದೈನ್ಯತೆಯಿಂದ ತಮ್ಮ ಕೃತಜ್ಞತೆ ವ್ಯಕ್ತಪಡಿಸುತ್ತವೆ ಎನ್ನುತ್ತಾರೆ ಹಸ್ತಪ್ರದ  ಟ್ರಸ್ಟ್ ನ ಯುವ ಸದಸ್ಯರು‌.

ಈ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ನ   ಸದಸ್ಯರು ಬಹಳ ವ್ಯವಸ್ಥಿತವಾಗಿ ವಿವಿಧ ಕೆಲಸ ಕಾರ್ಯಗಳನ್ನು ಹಂಚಿಕೊಂಡಿದ್ದಾರೆ ಅದು ಅಡುಗೆ ಮಾಡಲು ಬೇಕಾದ ಸಾಮಗ್ರಿ ತರುವುದಾಗಿರಬಹುದು, ಅಡುಗೆ ಕೋಣೆ ಸ್ವಚ್ಚ ಮಾಡುವ ಕಾರ್ಯ, ಅಡುಗೆ ತಯಾರಿಸುವ ಕಾರ್ಯ, ಆಹಾರ ಪ್ಯಾಕ್ ಮಾಡಿಕೊಂಡು ನಗರದ ವಿವಿಧ ಓಣಿಗಳಿಗೆ ತೆರಳಿ ಹಂಚುವ ಕಾರ್ಯಗಳನ್ನು ಸೇವಾ ಮನೋಭಾವದಿಂದ, ಸ್ವಸಂತೋಷದಿಂದ, ನಿಷ್ಠೆಯಿಂದ ಮಾಡುತ್ತಾರೆ , ಅಲ್ಲದೆ ತಮಗೆ ದೇಣಿಗೆ ನೀಡಿದ ವ್ಯಕ್ತಿಗಳ ಹೆಸರನ್ನು ಆಹಾರದ ಪೊಟ್ಟಣದಲ್ಲಿ‌ ಇರಿಸಿ ಅವರಿಗೆ ಆ ಚಿತ್ರವನ್ನು ಕಳಿಸುವ ಮೂಲಕ ಧನ್ಯತಾ ಭಾವವನ್ನು ತೋರುತ್ತಾರೆ.

ಆಹಾರ ಸಿಗದೇ ಕಂಗಾಲಾದ ಬೀದಿ ನಾಯಿಗಳು ವೃಧ ಬಿಕ್ಷುಕಿಯೊಬ್ಬಳ ಮೇಲೆ ಹಲ್ಲೆ ಸಡೆಸಿ ಆಕೆಯನ್ನು ತಿಂದು ಹಾಕಿರುವ ಮನ ಕಲಕುವ ವಿಷಯ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, ಮುಂದೆ ನಾಯಿಗಳು ತಮ್ಮ ಹಸಿವಿಗಾಗಿ ಮಾನವರನ್ನು ಬಲಿ ಪಡೆದುಕೊಳ್ಳದಂತೆ ನೋಡಿಕೊಳ್ಳವುದು ನಮ್ಮ ಕರ್ತವ್ಯ.

ವಿಶ್ವಾಸಿ ಪ್ರಾಣಿಗಳೊಂದಿಗೆ ವಿಶ್ವಾಸದಿಂದ ನಡೆದುಕೊಂಡು ಅವುಗಳಿಗೆ ಪ್ರಕೃತಿ ಕೊಟ್ಟಿರುವ ಬದುಕುವ ಹಕ್ಕನ್ನು ಪೋಷಿಸಿ, ಮಾನವೀಯತೆಯಿಂದ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ನೇರವಾಗಬೇಕು. ಈ ಸಂಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳುವುದರ ಜೊತೆಗೆ ಪ್ರಾಣಿ – ಪಕ್ಷಿಗಳನ್ನು ಸಹ ಕಾಪಾಡಿಕೊಳ್ಳಬೇಕಿದೆ.

ಎಲ್ಲ ಜೀವಿಗಳಿಗೂ ಭೂಮಿಯ ಮೇಲೆ ಜೀವಿಸುವ ಹಕ್ಕನ್ನು ಪ್ರಕೃತಿಮಾತೆ ನೀಡಿದ್ದಾಳೆ. ಅದರಲ್ಲೂ ಬುದ್ಧಿವಂತ ಜೀವಿಯಾದ ಮಾನವ ತನ್ನೊಂದಿಗೆ ಜೀವಿಗಳನ್ನು ಸಹ ರಕ್ಷಿಸಿ, ಪೋಷಣೆ ಮಾಡಿ, ತಾನೂ ತಿಂದು ಒಂದು ತುತ್ತನ್ನು ಆ ಜೀವಿಗಳಿಗೂ ನೀಡಿ ಸಹೃದಯತೆಯಿಂದ ಬಾಳಿದಾಗ ಮನುಷ್ಯನ ಬಾಳು ಸಾರ್ಥಕವಾಗುತ್ತದೆ.

ಈ ಲೇಖನ ಓದಿದ ಸಹೃದಯೀ ನಾಗರಿಕರು ಸ್ವತಃ ತಾವಾಗಲಿ ತಮ್ಮ ಸ್ನೇಹಿತರಾಗಲಿ  ಅಥವಾ ಇತರೇ ಯಾವುದೇ ತರಹದ ವಾಣಿಜ್ಯ ಸಂಸ್ಥೆಗಳು ಇಡೀ ಒಂದು ದಿನ ಅಥವಾ ಒಂದು ವಾರದ ಆಹಾರದ ಸಾಮಗ್ರಿ ಅಥವಾ ವೆಚ್ಚವನ್ನು ಪ್ರಾಯೋಜಿಸಲು ಸೂಚಿಸಬಹುದು ಮತ್ತು ದಾನಿಗಳ ಹೆಸರನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಯೋಜಕರೆಂದು ಪ್ರಕಟಿಸಲಾಗುವದು ಎಂದು ಅನಂತ ಇನ್ನಂಜೆ ತಿಳಿಸಿರುತ್ತಾರೆ.

Donate : https://rzp.Io/l/hasthapradhacti

ಆಸಕ್ತರು ಹಸ್ತಪ್ರದ ಕಾರ್ಯಚಟುವಟಿಕೆ ಕುರಿತು ತಿಳಿದುಕೊಳ್ಳಲು ಈ ಕೆಳಗೆ ತಿಳಿಸಿದ ಸಾಮಾಜಿಕ ಜಾಲ ತಾಣಗಳಿಗೆ ಭೇಟಿ ನೀಡಬಹುದು:

ಇನ್ ಸ್ಟಾಗ್ರಾಂ : 

https://instagram.com/hasthapradha?utm_medium=copy_link

ಫೇಸ್ ಬುಕ್ : https://m.facebook.com/hasthapradhacti/

ಯ್ಯೂಟೂಬ್ : https://youtube.com/channel/UC63gMgUT7yNSzKqYjmZZm7g

ಇತ್ತೀಚಿನ ಸುದ್ದಿ

ಜಾಹೀರಾತು