ಇತ್ತೀಚಿನ ಸುದ್ದಿ
ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ ಪ್ರಕರಣ: ನಾಪತ್ತೆಯಾಗಿದ್ದ ಸಾಕು ಮಗಳು, ಆಕೆಯ ಸ್ನೇಹಿತ ಸಹಿತ 5 ಮಂದಿ ಬಂಧನ
18/12/2023, 18:13

ಉಡುಪಿ(reporterkarnataka.com): ಸಮಾಜ ಸೇವಕ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಾಕು ಮಗಳು, ಆಕೆಯ ಸೇಹಿತ ಸಹಿತ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಲೀಲಾಧರ ಶೆಟ್ಟಿಯವರ ಸಾಕು ಪುತ್ರಿಯನ್ನು ಕೇರಳದ
ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆಕೆಯ ಸ್ನೇಹಿತ ಶಿರ್ವ ನಿವಾಸಿ ಗಿರೀಶ್ (20) ಮತ್ತು ನಾಪತ್ತೆಯಾಗಲು ಸಹಕರಿಸಿದವರಾದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಝೀಜ್ ಎಂಬವರನ್ನೂ ಕೂಡ ದಸ್ತಗಿರಿ ಮಾಡಲಾಗಿದೆ.
ಲೀಲಾಧರ ಶೆಟ್ಟಿ ಅವರು 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಡಿಸೆಂಬರ್ 11ರಂದು ಆಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾಕು ಮಗಳು ನಾಪತ್ತೆಯಾಗಿರುವುದರಿಂದ ನೊಂದ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಎಲ್. ಶೆಟ್ಟಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಡುವೆ ಬಂಧಿತ ಆರೋಪಿ ಗಿರೀಶ್ ವಿರುದ್ದ ಪೊಕ್ಸೊ ಹಾಗೂ ಕಿಡ್ನ್ಯಾಪ್ ಪ್ರಕರಣಗಳನ್ನು ಹಾಗೂ ಇತರ ಮೂವರ ವಿರುದ್ದ ಪೊಕ್ಸೊ ಪ್ರಕರಣವನ್ನು ದಾಖಲಿಸಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.