ಇತ್ತೀಚಿನ ಸುದ್ದಿ
ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ ಕೂಡ ಕಟಕಟೆಗೆ
13/11/2025, 20:12
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ರೆಸಾರ್ಟ್ ನ ವಸತಿಗೃಹದಲ್ಲಿ ಕುಡಿದು ಗಲಾಟೆ ಮಾಡಿದ್ದನ್ನು ವಿಡಿಯೋ ಚಿತ್ರೀಕರಿಸಿದನ್ನು ಪ್ರಶ್ನಿಸಿದ ಕಾರ್ಮಿಕನನ್ನು ಚಾಕುವಿಂದ ಇರಿದು ಕೊಲೆ ಮಾಡಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕೊಲೆಯ ಸತ್ಯಾಸತ್ಯತೆಯನ್ನು ಮುಚ್ಚಿಟ್ಟು ಸುಳ್ಳು ಹೇಳಿ ತಪ್ಪು ಮಾಹಿತಿ ನೀಡಿದ ವ್ಯಕ್ತಿ ಕೂಡ ಕಾನೂನು ಕ್ರಮಕ್ಕೆ ಒಳಗಾಗಿದ್ದಾನೆ. ಅಸ್ಸಾಂ ಮೂಲದ, ಪ್ರಸ್ತುತ 1ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ದಯಾನಂದ ಪ್ರಸಾದ್ ಎಂಬಾತ ಕೊಲೆ ಆರೋಪಿಯಾಗಿದ್ದು, ಈತನ ಭಾಮೈದ ಸಂತೋಷ್ ಕುಮಾರ್ ಪ್ರಕರಣದ ಬಗ್ಗೆ ಕಟ್ಟುಕತೆ ಕಟ್ಟಿ, ಕಾನೂನು ಕುಣಿಕೆಗೆ ಸಿಲುಕಿರುವ ಆರೋಪಿ ಆಗಿದ್ದಾನೆ.
*ಏನಿದು ಕೊಲೆ ಪ್ರಕರಣ?*
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿರುವ ದಿ ತಾಜ್ ರೆಸಾರ್ಟ್ ನಲ್ಲಿ ಬೆಂಗಳೂರಿನ ಐಡಿಯಲ್ ಸಲ್ಯೂಷನ್ ಕಂಪನಿಯಿಂದ ಹೊರಗುತ್ತಿಗೆ ಆಧಾರದ ಮೇರೆಗೆ ಗಾರ್ಡನಿಂಗ್ ಕೆಲಸ ಮಾಡುತ್ತಿರುವ ಕೆಲಸಗಾರರಿಗೆ 1ನೇ ಮೊಣ್ಣಂಗೇರಿಯಲ್ಲಿರುವ ಕೋರಮಂಡಲ ಬ್ರೀಜ್ ಪ್ರಾಪರ್ಟಿಸ್ ಪ್ರೈವೇಟ್ ಕಂಪನಿ ಲಿಮಿಟೆಡ್ ಗೆ ಸೇರಿದ ವಸತಿ ಗೃಹದಲ್ಲಿ ವಸತಿ ಸೌಕರ್ಯವಿದ್ದು, ದಿನಾಂಕ 07-11-2025 ರಂದು ರಾತ್ರಿ 8.30 ಗಂಟೆಗೆ ಈ ವಸತಿ ಗೃಹದಲ್ಲಿದ್ದ ದಯಾನಂದ ಪ್ರಸಾದ್ (41) ಕುಡಿದು ಗಲಾಟೆ ಮಾಡಿ ಬಾಟಲಿಯನ್ನು ಮನೆಯ ಪಕ್ಕದಲ್ಲಿರುವ ಮೆಟ್ಟಿಲಿಗೆ ಒಡೆದು ಹಾಕಿದ್ದಾನೆ. ಇದನ್ನು ಪಕ್ಕದ ರೂಮಿನಲ್ಲಿದ್ದ ಅಸ್ಸಾಂ ಮೂಲದ ದಿಲೀಪ್ ಶರ್ಮ (37) ಎಂಬಾತ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಅವರ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗೆ ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾನೆ. ಇದರಿಂದ ದಯಾನಂದ ಪ್ರಸಾದ್ ಕೋಪಗೊಂಡು ದಿಲೀಪ್ ಶರ್ಮನೊಂದಿಗೆ ಜಗಳವಾಡಿ ಕೆನ್ನೆ, ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ.
ಆದರೆ ಈ ಸಂದರ್ಭ ಸ್ಥಳದಲ್ಲಿದ್ದ, ಪ್ರತ್ಯಕ್ಷಸಾಕ್ಷಿ ದಯಾನಂದ ಪ್ರಸಾದನ ಭಾಮೈದ (ಹೆಂಡತಿ ತಮ್ಮ) ಸಂತೋಷ್ ಕುಮಾರ್ ಎಂಬಾತ, ಜಿಲ್ಲಾಸ್ಪತ್ರೆ ಮಡಿಕೇರಿಯಲ್ಲಿ ವೈದ್ಯರ ಬಳಿ,
ದಿಲೀಪ್ ಶರ್ಮನು ಮನೆಯ ಸ್ಟೇರ್ ಕೇಸ್ ನಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಹೇಳಿ ಚಿಕಿತ್ಸೆಗೆ ದಾಖಲು ಮಾಡಿದ್ದಾನೆ.
ನಂತರ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸಾಗಿಸಿ, ಈ ಮೇಲಿನ ಕಟ್ಟುಕತೆಯನ್ನೇ ವೈದ್ಯರಿಗೆ ಹೇಳಿ ಸುಳ್ಳು ಮಾಹಿತಿ ನೀಡಿ ಚಿಕಿತ್ಸೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿ ಆಗದೇ ದಿಲೀಪ್ ಶರ್ಮ ದಿನಾಂಕ 08-11-2025 ರಂದು ಅಸು ನೀಗಿದ್ದಾರೆ.
ಪ್ರಕರಣದ ವಿಚಾರಣೆಗಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಿದಾಗ ಮೃತ ದಿಲೀಪ್ ಶರ್ಮನಿಗೆ ದಯಾನಂದ ಪ್ರಸಾದ್ ಚಾಕುವಿನಿಂದ ಇರಿದ ಪರಿಣಾಮ ಆತ ಮೃತಪಟ್ಟಿರುವುದು ಕಂಡುಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ದಯಾನಂದ ಪ್ರಸಾದ್ ನ ಪತ್ತೆಗಾಗಿ ಮಡಿಕೇರಿ ಪೊಲೀಸ್ ಉಪವಿಭಾಗದ ಡಿ.ಎಸ್.ಪಿ. ಸೂರಜ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಹೆಚ್.ವಿ. ಚಂದ್ರಶೇಖರ್ ಮತ್ತು ಉಪ ವಿಭಾಗ ಮಟ್ಟದ ಅಪರಾಧ ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ 10-11-2025 ರಂದು ಅಸ್ಸಾಂ ಮೂಲದ, ಪ್ರಸ್ತುತ 1ನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ದಯಾನಂದ ಪ್ರಸಾದ್ ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.
ಕೊಲೆಯ ವಾಸ್ತವ ವಿಷಯ ಗೊತ್ತಿದ್ದರೂ ಸಹ ವೈದ್ಯರ ಬಳಿ ದಿಲೀಪ್ ಶರ್ಮ ಸ್ಟೇರ್ ಕೇಸ್ ನಿಂದ ಬಿದ್ದು ಗಾಯಗೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ ಸಂತೋಷ್ ಕುಮಾರ್ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.
*ಶ್ಲಾಘನೆ:* ಈ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಪಿ. ದಿನೇಶ್ ಕುಮಾರ್ ಶ್ಲಾಘಿಸಿದ್ದಾರೆ.












