ಇತ್ತೀಚಿನ ಸುದ್ದಿ
ಕುಂದಾಪುರ ಸರಕಾರಿ ಕಾಲೇಜಿನಲ್ಲಿ ಹಿಜಾಬ್, ಕೇಸರಿ ಶಾಲು ಎರಡಕ್ಕೂ ಬ್ಯಾನ್’: ಎಸ್ ಡಿಎಂಸಿ ನಿರ್ಧಾರ
05/02/2022, 18:35
ಕುಂದಾಪುರ(reporterkarnataka.com): ಹಿಜಾಬ್ ಹಾಗೂ ಕೇಸರಿ ಶಾಲು ಗಲಾಟೆ ಜಿಲ್ಲೆಯಲ್ಲಿ ವೇಗವಾಗಿ ಪಸರಿಸುತ್ತಿದ್ದು, ಉಡುಪಿ ಸರಕಾರಿ ಕಾಲೇಜಿನಿಂದ ಕುಂದಾಪುರ ಸರಕಾರಿ ಕಾಲೇಜಿಗೂ ತಟ್ಟಿದೆ. ಮೊದಲು ಹುಡುಗರು ಕೇಸರಿ ಶಾಲು ಹಾಕಿದರೆ, ಇಂದು ಹುಡುಗಿಯರೂ ಕೇಸರಿ ಶಾಲು ಧರಿಸಿದ್ದಾರೆ. ಈ ಮಧ್ಯೆ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಹಾಗೂ ಕೇಸರಿ ಶಾಲು ಎರಡಕ್ಕೂ ಬ್ಯಾನ್ ಹಾಕಲು ತೀರ್ಮಾನಿಸಿದೆ.
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಾಲೇಜು ಆಡಳಿತ ಮಂಡಳಿ ಸಭೆ ಇಂದು ನಡೆದಿದ್ದು, ಈ ಸಭೆಯಲ್ಲಿ ನಿರ್ಧಾರವಾದಂತೆ, ತರಗತಿಯೊಳಗೆ ಧಾರ್ಮಿಕತೆಗೆ ಅವಕಾಶವಿಲ್ಲ. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ತರಗತಿಗೆ ಯಾರೂ ಬರುವಂತಿಲ್ಲ. ಸೋಮವಾರದಿಂದ ಕಾಲೇಜಿನ ನಿಯಮ ಪಾಲಿಸಿ ಕಾಲೇಜಿಗೆ ಬರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕಾಲೇಜು ಗೇಟ್ ತನಕ ಯಾವುದೇ ವಸ್ತ್ರ ಧರಿಸಿ ಬರಬಹುದು ಆದರೆ ತರಗತಿಗೆ ಪ್ರವೇಶಿಸುವಾಗ ಹಿಜಾಬ್ ಅಥವಾ ಕೇಸರಿ ಶಾಲಿಗೆ ಅವಕಾಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸದಸ್ಯ ಮೋಹನದಾಸ ಶೆಣೈ ಹೇಳಿಕೆ ನೀಡಿದ್ದಾರೆ.