ಇತ್ತೀಚಿನ ಸುದ್ದಿ
ಕುಕ್ಕೆ ಸುಬ್ರಹ್ಮಣ್ಯ ಘೋರ ದುರಂತಕ್ಕೆ ಮೇಘಸ್ಫೋಟ ಕಾರಣ?: ಗುಡ್ಡ ಕುಸಿತದಿಂದ ಮಣ್ಣಿನಡಿ ಸಿಲುಕಿದ್ದ ಇಬ್ಬರು ಬಾಲಕಿಯರು ಮೃತ್ಯು
02/08/2022, 10:17
ಸುಬ್ರಹ್ಮಣ್ಯ(reporterkarnataka.com): ದೇಶದ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಮೇಘಸ್ಫೋಟ ಸಂಭವಿಸಿದ್ದು, ಗುಡ್ಡ ಜರಿದು ಮಣ್ಣಿನಡಿ ಬಿದ್ದ ಮನೆಯೊಳಗೆ ಸಿಲುಕಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಕುಮಾರಧಾರ ಪರ್ವತಮುಖಿ ಬಳಿಯ ಕುಸುಮಾಧರ ಎಂಬವರ ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣು ಪಾಲಾಗಿದ್ದು, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಮೃತದೇಹಗಳನ್ನು ಹೊರತೆಗೆಯಲಾಯಿತು.
ಮೇಘಸ್ಪೋಟ ಮತ್ತು ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದ್ದು, ಎರಡು ದಿನ ಭಕ್ತಾದಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಸಂಪಾಜೆ ಕಲ್ಲುಗುಂಡಿಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ ಕಾರ್ ಗಳು ನೀರಿನಲ್ಲಿ ತೇಲಿವೆ. ಸಂಪಾಜೆ, ಕಲ್ಲುಗುಂಡಿ ಪರಿಸರದಲ್ಲಿ ಅಧಿಕ ಮಳೆಯಾಗುತ್ತಿದ್ದು. ಅಪಾಯದಲ್ಲಿದ್ದ 15 ಮನೆಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಕೊಡಗಿನ ಜೋಡುಪಾಲದಂತೆ ಅರೆಕಲ್ ಬೆಟ್ಟದಲ್ಲಿ ಭೂಕುಸಿತ ಸಂಭವಿಸಿರುವ ಶಂಕೆ ವ್ಯಕ್ತಿವಾಗಿದೆ.