ಇತ್ತೀಚಿನ ಸುದ್ದಿ
ಕುಕ್ಕೆ ಸುಬ್ರಹ್ಮಣ್ಯ ದೇವರ ನೌಕಾವಿಹಾರ, ಅವಭೃತೋತ್ಸವ: ಯಶಸ್ವಿನಿಯಿಂದ ನೀರಾಟ
09/12/2024, 12:13
ಕುಕ್ಕೆ ಸುಬ್ರಹ್ಮಣ್ಯ(reporterkarnataka.com): ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿbಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ಕುಮಾರಧಾರ ನದಿಯಲ್ಲಿ ಜರುಗಿತು.
ನದಿಯ ಪವಿತ್ರ ತೀರ್ಥದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ ನಡೆಯಿತು. ದೇವಳದ ಪ್ರಧಾನ ಅರ್ಚಕರು ದೇವರ ಅವಭೃತೋತ್ಸವದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಭಾನುವಾರ ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ನಡೆಯಿತು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರನ್ನು ಪಲ್ಲಕ್ಕಿಯಲ್ಲಿ ರಥಬೀದಿಗೆ ತಂದು ಬಂಡಿ ರಥದಲ್ಲಿ ಕುಮಾರಧಾರಾವರೆಗೆ ಅವಭೃತೋತ್ಸವದ ಸವಾರಿ ಮೆರವಣಿಗೆ ಮೂಲಕ ತರಲಾಯಿತು. ಈ ಮಧ್ಯೆ ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು. ಬಳಿಕ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ಪುಷ್ಪಾಲಂಕೃತವಾಗಿ ಸಿಂಗರಿಸಲ್ಪಟ್ಟ ಎರಡು ದೋಣಿಗಳನ್ನು ಜೋಡಿಸಿ ಮಾಡಿದ ಸುಂದರ ತೆಪ್ಪದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ನಡೆಯಿತು. ಕುಮಾರಧಾರೆಯ ಜಳಕದಗುಂಡಿಯಲ್ಲಿ ಅವಭೃತೋತ್ಸವ ಜರುಗಿತು. ಸಾವಿರಾರು ಭಕ್ತರ ಇದಕ್ಕೆ ಸಾಕ್ಷಿಯಾದರು.
ದೇವರ ಜಳಕದ ಬಳಿಕ ಕುಮಾರಧಾರ ನದಿತೀರದ ಅವಭೃತಕಟ್ಟೆಯಲ್ಲಿ ವಿಶೇಷ ಕಟ್ಟೆಪೂಜೆ ನೆರವೇರಿಸಲಾಯಿತು. ನೆರೆದ ಭಕ್ತರ ನಡುವೆ ಕುಮಾರಧಾರಾ ನದಿಯಲ್ಲಿ ದೇಗುಲದ ಆನೆ ಯಶಸ್ವಿನಿಯ ನೀರಾಟ ನಡೆಯಿತು.