ಇತ್ತೀಚಿನ ಸುದ್ದಿ
ಕುಡ್ಲದ ಪಿಲಿಪರ್ಬ-2024ರ ಚಪ್ಪರ ಮುಹೂರ್ತ: ತುಳುನಾಡಿನ ಗತವೈಭವದ ಘನ ಪರಂಪರೆ ಮತ್ತೆ ಮೆಲುಕು
04/10/2024, 21:38
ಮಂಗಳೂರು(reporterkarnataka.com): ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ನಡೆಯಲಿರುವ ತೃತೀಯ ವರ್ಷದ “ಕುಡ್ಲದ ಪಿಲಿ ಪರ್ಬ-2024” ದ ಚಪ್ಪರ ಮುಹೂರ್ತ ಕಾರ್ಯಕ್ರಮ ನಗರದ ಕೇಂದ್ರ ಮೈದಾನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, “ಕರಾವಳಿ ಭಾಗದಲ್ಲಿ ದಸರಾ ಎಂದರೆ ಅಲ್ಲಿ ಹುಲಿವೇಷ ಇದ್ದೇ ಇರುತ್ತದೆ. ಈ ಕಲೆ ಕರಾವಳಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಜನಪ್ರಿಯತೆ ಜೊತೆಗೆ ಈ ಕಲೆಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಇದೇ ಅಕ್ಟೋಬರ್ 11ರ ಶುಕ್ರವಾರದಂದು ನಡೆಯಲಿರುವ ತೃತೀಯ ವರ್ಷದ ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ ಹತ್ತು ಹುಲಿವೇಷ ತಂಡಗಳಿಗೂ ಶುಭಹಾರೈಕೆಗಳು. ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಲಿರುವ ಸಾರ್ವಜನಿಕರೆಲ್ಲರಿಗೂ ಪ್ರೀತಿಯ ಸ್ವಾಗತ ಬಯಸುತ್ತಾ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಸಾಧಿಸಲಿ, ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಮನಪಾ ಸದಸ್ಯರುಗಳ ಸಹಿತ ಅನೇಕರು ಉಪಸ್ಥಿತರಿದ್ದರು.