ಇತ್ತೀಚಿನ ಸುದ್ದಿ
ಕುಡಿದ ಮತ್ತಿನಲ್ಲಿ ಪತ್ನಿಗೆ ದೊಣ್ಣೆಯಿಂದ ಹೊಡೆದು ಕೊಲೆ: ಆರೋಪಿ ಪತಿ ಬಂಧನ; ಪ್ರಕರಣ ಮುಚ್ಚಿ ಹಾಕಲು ಹಂತಕನಿಂದ ಯತ್ನ
19/07/2023, 10:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಾಳೂರು ಸಮೀಪದ ಕಲ್ಲಕ್ಕಿ ಕಾಫಿ ತೋಟದಲ್ಲಿ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಲೀಲಾಬಾಯಿ (38)ಮೃತಪಟ್ಟ ದುರ್ದೈವಿ. ಕಲ್ಲಕ್ಕಿ ಎಸ್ಟೇಟ್ ಲೈನಿನಲ್ಲಿ ದಾವಣಗೆರೆ ಮೂಲದ ಶಿವ ಹಾಗೂ ಪತ್ನಿ ಲೀಲಾಬಾಯಿ ಕಾರ್ಮಿಕರಾಗಿ ಎರಡು ವರ್ಷದಿಂದ ತೋಟದ ಕೆಲಸಕ್ಕೆ ಸೇರಿದ್ದರು. ಆಕೆಯ ಪತಿ ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿ ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡಿದಿದ್ದು ಪತ್ನಿ ಲೀಲಾಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮಂಗಳವಾರ ಸಹಜ ಸಾವಾಗಿದೆ ಎಂದು ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ದು ಸಾಕ್ಷ್ಯ ನಾಶ ಮಾಡಲು ಪತ್ನಿಯ ರಕ್ತಸಿಕ್ತ ಸೀರೆ ಬದಲಾಯಿಸಿ ಅನುಮಾನ ಬಾರದಂತೆ ಅಂತ್ಯ ಸಂಸ್ಕಾರ ಮಾಡಲು ಪತಿ ಶಿವ ಮುಂದಾಗಿದ್ದ ಎನ್ನಲಾಗಿದೆ.ಈ ಬಗ್ಗೆ ತೋಟದ ಮೇಲ್ವಿಚಾರಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಸ್ಥಳ ಮಹಜರು ನಡೆಸಿ ಆರೋಪಿ ಶಿವ ಎಂಬವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಆರೋಪಿ ಬಾಯಿಬಿಟ್ಟಿದ್ದಾನೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್,ಮೂಡಿಗೆರೆ ಸರ್ಕಲ್ ಇನ್ ಸ್ಪೆಕ್ಟರ್ ಸೋಮೇಗೌಡ, ಬಾಳೂರು ಸಬ್ ಇನ್ ಸ್ಪೆಕ್ಟರ್ ವಿ.ಶ್ರೀನಾಥ್ ರೆಡ್ಡಿ, ಎಎಸ್ಐಗಳಾದ ರಾಜು,ವಿಶ್ವನಾಥ್,ಹೆಡ್ ಕಾನ್ ಸ್ಟೇಬಲ್ ಶ್ರೀಧರ್, ಸಿಬ್ಬಂದಿಗಳಾದ ಗಿರೀಶ್,ಮನು,ಅಭಿಷೇಕ್,ಮಹೇಶ್, ಸತೀಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶವವನ್ನು ಶವಾಗಾರಕ್ಕೆ ಸಾಗಿಸಲು ಜಾವಳಿಯ ಧರ್ಮಸ್ಥಳ ಶೌರ್ಯ ರಾಷ್ಟ್ರೀಯ ವಿಪತ್ತು ಘಟಕದ ಸದಸ್ಯರು ಸಹಕರಿಸಿದರು.














