ಇತ್ತೀಚಿನ ಸುದ್ದಿ
ಕೆಎಸ್ಸಾರ್ಟಿಸಿ ಪುತ್ತೂರು ಡಿಪೋಗೆ ಹೆಚ್ಚುವರಿ ಬಸ್ ಮತ್ತು ಸಿಬ್ಬಂದಿ ನೇಮಕ ಮಾಡಿ; ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಗೆ ಶಾಸಕ ಅಶೋಕ್ ರೈ ಮನವಿ
08/06/2023, 20:51

ಪುತ್ತೂರು(reporterkarnataka.com): ಕೆಎಸ್ಸಾರ್ಟಿಸಿ ಪುತ್ತೂರು ಡಿಪೋಗೆ ಹೆಚ್ಚುವರಿ ಬಸ್ಸು, ಚಾಲನೆ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪುತ್ತೂರು ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವರ ಕಚೇರಿಗೆ ತೆರಳಿದ ಶಾಸಕರು ಈ ಹಿಂದೆ ಪುತ್ತೂರು ಘಟಕ ವ್ಯಾಪ್ತಿಯಲ್ಲಿ ಸರಕಾರಿ ಬಸ್ಸುಗಳ ಕೊರತೆ ಇರಲಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕಾರ್ಮಿಕರಿಗೆ ತುಂಬಾ ಪ್ರಯೋಜನವಾಗುತ್ತಿತ್ತು. ಆದರೆ ಕೋವಿಡ್ ಲಾಕ್ಡೌನ್ ನಂತರ ಬಸ್ಸುಗಳ ಓಡಾಟವನ್ನು ಕಡಿತಗೊಳಿಸಿರುವ ಕಾರಣ ಗ್ರಾಮೀಣ ಭಾಗದಲ್ಲಿ ಬಸ್ಸುಗಳ ಕೊರತೆ ಇದೆ. ಪುತ್ತೂರು ವಿಧಾನಸಭಾ ವ್ಯಾಪ್ತಿಯ ಬಹುತೇಕ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳ ಕೊರತೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಬಸ್ಸುಗಳಲ್ಲಿ ಚಾಲನಾ ಸಿಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಳ ಕೊರತೆಯೂ ಇದ್ದು . ಹೆಚ್ಚಿನ ಚಾಲಕರು ಮತ್ತು ಸಿಬಂದಿಗಳು ವರ್ಗಾವಣೆಯಾಗಿ ಬೇರೆಡೆಗೆ ತೆರಳಿದ್ದು ಇದರಿಂದಾಗಿ ಪುತ್ತೂರು ಡಿಪೋದಲ್ಲಿ ತೀವ್ರ ತರದ ಆಡಳಿತಾತ್ಮಕ ಸಮಸ್ಯೆಗಳು ಉಂಟಾಗಿದ್ದು . ಪುತ್ತೂರು ಡಿಪೋಗೆ ಸಲ್ಲಿಸಲಾಗಿದ್ದ ಬೇಡಿಕೆಯನ್ನು ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದ್ದಾರೆ.
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ ಶಾಸಕರು ಮನವಿ ಸಲ್ಲಿಸಿದ್ದಾರೆ.