ಇತ್ತೀಚಿನ ಸುದ್ದಿ
ಕೃಷ್ಣಾ ನದಿ ಸೇರಿದ 3 ಲಕ್ಷ ಕ್ಯೂಸೆಕ್ ನೀರು: ಅಥಣಿ ತಾಲೂಕಿನಲ್ಲಿ ಭಾರಿ ಪ್ರವಾಹ, ಗುಳೆ ಹೊರಟ ಸಾವಿರಾರು ಗ್ರಾಮಸ್ಥರು
25/07/2021, 19:09
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕೃಷ್ಣಾ ಸೇರಿದಂತೆ ಬೆಳಗಾವಿಯ ಎಲ್ಲ ಪ್ರಮುಖ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಅಥಣಿ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿ ತೀರದ ಗ್ರಾಮಗಳಿಗೆ ನೀರು ನುಗ್ಗಿದೆ. ಸಾವಿರಾರು ಮಂದಿ ಗ್ರಾಮಸ್ಥರು ಗುಳೆ ಹೋಗಿದ್ದಾರೆ.
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದ ಇಡೀ ಅಥಣಿ ತಾಲೂಕಿನ ಇಂಗಳಗಾಂವ ಹುಲಗಬಾಳ, ಖವಟಕೊಪ್ಪ, ಪಿ ಕೆ ನಾಗನೂರ ಸೇರಿದಂತೆ ಹಲವು ಗ್ರಾಮಗಳ ತೋಟದ ಮನೆಗಳಿಗೆ ನೀರು ನುಗ್ಗಿದೆ. ತಾಲೂಕು ಆಡಳಿತದಿಂದ ಜನರ ಸ್ಥಳಾಂತರ ಮಾಡಲಾಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಶೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ಅಥಣಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಇನ್ನೂ ಎರಡು ದಿನಗಳ ಕಾಲ ಪ್ರವಾಹ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಕೃಷ್ಣಾ ನದಿ ತೀರದ ಜನರು ಕಾಳಜಿ ಕೇಂದ್ರಗಳಿಗೆ ಬರುವ ಮೂಲಕ ಜೀವರಕ್ಷಣೆಗೆ ಆದ್ಯತೆ ಕೊಡಬೇಕು. ಸಂತ್ರಸ್ತರಿಗೆ ಸರ್ಕಾರದ ಸಮರ್ಪಕ ಪರಿಹಾರ ಸಿಗುವ ಭರವಸೆ ಇದ್ದು, ಪ್ರವಾಹದಂತಹ ಸಂಕಷ್ಟದ ಸಮಯದಲ್ಲಿ ಆದಷ್ಟು ಬೇಗ ಗ್ರಾಮಗಳಿಂದ ಹೊರಗೆ ಬಂದು ಸುರಕ್ಷಿತ ತಾಣ ಸೇರಬೇಕೆಂದು ಮನವಿ ಮಾಡಿದರು.