ಇತ್ತೀಚಿನ ಸುದ್ದಿ
ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ
05/11/2025, 20:54
ಮಂಗಳೂರು(reporterkarnataka.com): ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು. ಇವರ ಜೀನ್‌ಗಳಲ್ಲಿ ಅಡಕವಾಗಿರುವ ಅಂಶವು ಭಾರತದ ಪುರಾತನ ಇತಿಹಾಸದಲ್ಲಿ ನಾಪತ್ತೆಯಾದ ಒಂದು ಪ್ರಮುಖ ಕೊಂಡಿಯಾಗಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ದೇಶದ ೭೫ ಪ್ರಿಮಿಟಿವ್ ಟ್ರೈಬ್ಸ್‌ಗಳಲ್ಲಿ ಒಂದಾದ ಕೊರಗ ಜನಾಂಗದ ಕುರಿತ ಅನುವಂಶಿಕ ಅಧ್ಯಯನವನ್ನು ಮಂಗಳೂರು ವಿವಿ ಮತ್ತು ಯೆನೆಪೋಯ ವಿವಿ ಜಂಟಿಯಾಗಿ ನಡೆಸಿದ್ದು, ಕೊರಗರ ಮೂಲದ ಕುರಿತು ಮಹತ್ವದ ಫಲಿತಾಂಶ ಲಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ, ಮಂಗಳೂರು ವಿವಿಯು ಇತರ ಖಾಸಗಿ ವಿವಿಗಳ ಜತೆ ಸಂಶೋಧನೆ ಆಧಾರಿತ ಒಪ್ಪಂದ ಮಾಡಿಕೊಂಡಿತ್ತು. ಅದರ ಭಾಗವಾಗಿ ಈ ಸಂಶೋಧನೆ ನಡೆದಿದ್ದು, ಮಹತ್ವದ ಮೈಲುಗಲ್ಲು ಸಾಧಿಸಿದೆ. ಮಂಗಳೂರು ವಿವಿ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಎಂ.ಎಸ್. ಮುಸ್ತಾಕ್ ಮತ್ತು ಯೆನೆಪೋಯ ಅಧ್ಯಯನ ಕೇಂದ್ರದ ಡಾ.ರಣಜಿತ್ ದಾಸ್ ನೇತೃತ್ವದಲ್ಲಿ ಈ ಸಂಶೋಧನೆ ನಡೆದಿದೆ ಎಂದು ತಿಳಿಸಿದರು.
ಸಂಶೋಧಕ ಡಾ.ಎಂ.ಎಸ್. ಮುಸ್ತಾಕ್ ಮಾತನಾಡಿ, ಸಂಶೋಧನೆಯ ಮುಖ್ಯ ಉದ್ದೇಶ ಕೊರಗರ ಮೂಲದ ನಿಖರ ಸ್ವರೂಪ ಪತ್ತೆ ಹಚ್ಚುವುದಾಗಿತ್ತು. ವೈಜ್ಞಾನಿಕ ಪರೀಕ್ಷೆಗಳನ್ನು ಬಳಸಿಕೊಂಡು ಕೊರಗರ ಜೀನ್ ಸಂಯೋಜನೆ (ಜೆನೆಟಿಕ್ ಕಾಂಪೊಸಿಶನ್)ಯನ್ನು ವಿಶ್ಲೇಷಿಸಲಾಗಿದೆ. ಕೊರಗರ ಜೀನ್ ಸಂಯೋಜನೆ ೩ ಪ್ರಮುಖ ಮೂಲಗಳಿಂದ ಬಂದಿರುವುದು ಸಂಶೋಧನೆಯಲ್ಲಿ ಖಚಿತವಾಗಿದೆ-ಪ್ರಾಚೀನ ದಕ್ಷಿಣ ಭಾರತೀಯರು (ಇವರು ಅಂಡಮಾನ್ ದ್ವೀಪದ ಬೇಟೆಯಾಡುವ ಜನಾಂಗಕ್ಕೆ ಸಂಬಂಧಿಸಿದವರು), ಸಿಂಧೂ ನಾಗರಿಕತೆಯ ಅಂಚಿನ ಜನರು (ಇವರು ಸಿಂಧೂ ನಾಗರಿಕತೆಯ ಸುತ್ತಮುತ್ತ ವಾಸಿಸುತ್ತಿದ್ದ ಜನಾಂಗ) ಹಾಗೂ ಇರಾನ್ ಪರ್ವತ ಪ್ರದೇಶದ ಪ್ರಾಚೀನ ಕೃಷಿಕರ ಮೂಲಗಳಿಂದ ಬಂದಿದೆ ಎಂದರು.
ಕೊರಗರ ಅನುವಂಶಿಕ ವಸ್ತುವಿನಲ್ಲಿ ಕಂಡುಬಂದ ಇರಾನ್ ನ್ಯೂಲಿಥಿಕ್ ಅಂಶವು ಇತರ ಭಾರತೀಯ ಜನಾಂಗಗಳಲ್ಲಿ ಕಂಡು ಬರುವುದಕ್ಕಿಂತ ಸಂಪೂರ್ಣ ವಿಭಿನ್ನವಾಗಿತ್ತು. ಇದು ತುಂಬ ಪ್ರಾಚೀನ ಮೂಲದಿಂದ ಬಂದದ್ದು, ಇದರರ್ಥ ಕೊರಗರು ಭಾರತದ ಜನಾಂಗೀಯ ಇತಿಹಾಸದಲ್ಲಿ ಹಳೆಯ ಮತ್ತು ಸ್ವತಂತ್ರ ಶಾಖೆಯಾಗಿ ಉಳಿದಿದ್ದಾರೆ. ಸಂಶೋಧನೆಯಲ್ಲಿ ಇಂದಿನ ವಿವಿಧ ದ್ರಾವಿಡ ಭಾಷಾ ಜನಾಂಗಗಳ ಜೀನ್ ಮಾದರಿಗಳನ್ನು ಪರೀಕ್ಷಿಸಲಾಯಿತು. ಕೊರಗರ ಅಂಶವಿಲ್ಲದೆ ಭಾರತೀಯ ಜನಾಂಗಗಳ ಮೂಲದ ಸಂಪೂರ್ಣ ಪರಿಕಲ್ಪನೆ ನೀಡಲು ಸಾಧ್ಯವಾಗುವುದಿಲ್ಲ ಎಂಬುದು ಸಂಶೋಧನೆ ಸಾಬೀತುಪಡಿಸಿದೆ ಎಂದು ವಿವರಿಸಿದರು.
ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು. ಇವರ ಜೀನ್‌ಗಳಲ್ಲಿ ಅಡಕವಾಗಿರುವ ಅಂಶವು ಭಾರತದ ಪುರಾತನ ಇತಿಹಾಸದಲ್ಲಿ ನಾಪತ್ತೆಯಾದ ಒಂದು ಪ್ರಮುಖ ಕೊಂಡಿಯಾಗಿದೆ ಎಂದರು.
ಸಂಶೋಧಕ ಡಾ.ರಣಜಿತ್ ದಾಸ್ ಮಾತನಾಡಿ, ಕೊರಗ ಸಮುದಾಯದಲ್ಲಿ ಕಂಡುಬರುವ ಜೀನ್ ಹ್ಯಾಪ್ಲೊಟೈಪ್, ಅವರೊಳಗಿನ ಅಂತರ್ ವಿವಾಹದ ಪರಿಣಾಮ ಆಗಿರಬಹುದು. ಅಲ್ಲದೆ ಈ ಅಧ್ಯಯನವು ಅನೇಕ ಅನುವಂಶಿಕ ಕಾಯಿಲೆಗಳಿಗೆ ಕಾರಣವಾಗಬಹುದಾದ ರೂಪಾಂತರಗಳನ್ನು ಪತ್ತೆ ಹಚ್ಚಿದೆ. ಕೊರಗ ಸಮುದಾಯದಲ್ಲಿ ಶಿಶು ಸಾವಿನ ಪ್ರಮಾಣ, ನರ ಸಂಬಂಧಿ ತೊಂದರೆಗಳು, ಕುರುಡುತನ, ಬಂಜೆತನ ಕಂಡುಬಂದಿದ್ದು, ಇದರ ಒಟ್ಟಾರೆ ಪರಿಣಾಮವಾಗಿ ಕೊರಗರ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿರಬಹುದು ಎಂದು ತಿಳಿಸಿದರು.
ಮಂಗಳೂರು ವಿವಿ ಪ್ರಾಧ್ಯಾಪಕಿ ಡಾ.ಸಬಿತಾ ಮತ್ತಿತರರು ಇದ್ದರು.












