ಇತ್ತೀಚಿನ ಸುದ್ದಿ
ಕೊಪ್ಪಳ ರಾಯರ ಮಠದ ಆಸ್ತಿ ಗೊಟಾಳಿ: ಸುಬುಧೇಂದ್ರ ಶ್ರೀಗಳ ವಿರುದ್ಧ ಮಧ್ಯರಾತ್ರಿ ಪ್ರತಿಭಟನೆ
27/03/2025, 17:53

ಕೆ.ಶಿವು ಲಕ್ಕಣ್ಣವರ ಹುಬ್ಬಳ್ಳಿ
info.reporterkarnataka@gmaip.com
ಕೊಪ್ಪಳದ ರೈಲು ನಿಲ್ದಾಣದ ಸಮೀಪದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಆಸ್ತಿ ವಿಸ್ವಾಮ ಮುನ್ನಲೆಗೆ ಬಂದಿದ್ದು, ಮೊನ್ನೆ ಬುಧವಾರ ಮಧ್ಯರಾತ್ರಿ ಕೊಪ್ಪಳದ ರಾಯರ ಮಠದ ಭಕ್ತರು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಯರ ಮಠದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸುಬುಧೇಂದ್ರ ಶ್ರೀಗಳು ಮೊನ್ನೆ ಬುಧವಾರ ರಾತ್ರಿ ಕೊಪ್ಪಳ ನಗರಕ್ಕೆ ಬಂದಿದ್ದರು. ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡುವಾಗ ‘ಕೊಪ್ಪಳದ ರಾಯರ ಮಠ ಮಂತ್ರಾಲಯದ ಪೀಠಕ್ಕೆ ಸೇರಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿಯಿವೆ. ಈಗಿನಂತೆಯೇ ಮುಂದಿನ ದಿನಗಳಲ್ಲಿಯೂ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಲು ಸ್ಥಳೀಯ ಹಿರಿಯರನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿ ರಚಿಸಲು ನೀವೇ ಹೆಸರುಗಳನ್ನು ಕೊಡಿ’ ಎಂದು ಶ್ರೀಗಳು ಹೇಳಿದರು.
ಇದರಿಂದ ಅಸಮಾಧಾನಗೊಂಡು ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ರಾಯರ ಮಠದ ಭಕ್ತರು ಶ್ರೀಗಳು ತೆರಳಿದ ಬಳಿಕ ಕೊಪ್ಪಳದ ರಾಯರ ಮಠ ಯಾರಿಗೂ ಸೇರಿದ್ದಲ್ಲ. ಐದು ದಶಕಗಳಿಂದ ಸ್ವತಂತ್ರ್ಯವಾಗಿ ನಡೆದುಕೊಂಡು ಬಂದಿದ್ದು, ಕೊಪ್ಪಳದ ಜನರೇ ನಡೆಸಿಕೊಂಡು ಹೋಗುತ್ತಿದ್ದಾರೆ.
ಇನ್ನು ಮುಂದೆಯೂ ನಮಗೇ ಸಂಪೂರ್ಣ ಅಧಿಕಾರ ಇರಬೇಕು. ಮಠದ ಅಭಿವೃದ್ಧಿಗೆ ಸರ್ಕಾರ ಹಾಗೂ ಮಂತ್ರಾಲಯ ಪೀಠದ ಹಣಕಾಸಿನ ನೆರವು ಬೇಡವೇ ಬೇಡ’ ಎಂದರು. ಅರ್ಪಣಾ ಮನೋಭಾವದಿಂದ ಇಷ್ಟು ವರ್ಷಗಳ ಕಾಲ ಇಲ್ಲಿನ ಮಠದ ವ್ಯವಸ್ಥಾಪಕರಾಗಿರುವ ಜಗನ್ನಾಥ ಹುನಗುಂದ ಅವರೇ ಅಧಿಕಾರ ನೋಡಿಕೊಳ್ಳುತ್ತಾರೆ. ಇದರಲ್ಲಿ ಮಂತ್ರಾಲಯ ಪೀಠ ಹಸ್ತಕ್ಷೇಪ ಮಾಡಬಾರದು ಎಂದು ಒತ್ತಾಯಿಸಿದರು.
ಇದನ್ನು ಸುಬುಧೇಂದ್ರ ಶ್ರೀಗಳ ಎದುರು ಹೇಳಲು ಮಧ್ಯರಾತ್ರಿಯಲ್ಲಿಯೇ ಸ್ಥಳೀಯ ಭಕ್ತರು ಶ್ರೀಗಳು ತಂಗಿದ್ದ ಭಕ್ತರೊಬ್ಬರ ನಿವಾಸಕ್ಕೆ ಕಾಲ್ನಡಿಗೆಯಲ್ಲಿಯೇ ಘೋಷಣೆಗಳನ್ನು ಕೂಗುತ್ತ ತೆರಳಿ ಪ್ರತಿಭಟನೆ ದಾಖಲಿಸಿದರು. ನಮ್ಮ ಮಠವನ್ನು ಈಗಿರುವಂತೆಯೇ ಸ್ವತಂತ್ರವಾಗಿ ನಡೆಸಿಕೊಂಡು ಹೋಗಲು ಬಿಟ್ಟು ಬಿಡಿ ಎಂದು ಆಗ್ರಹಿಸಿದರು.
ಇಲ್ಲಿನ ರಾಯರ ಮಠದ ಆಸ್ತಿ ವಿವಾದ ಕುರಿತು ಹಿಂದೆಯೂ ಇದೇ ರೀತಿ ಗೊಂದಲಗಳಾಗಿದ್ದವು. ಐದು ದಶಕಗಳಿಂದ ಮಠವನ್ನು ಸ್ವತಂತ್ರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು 1971ರಲ್ಲಿ ಮಂತ್ರಾಲಯಕ್ಕೆ ಇಲ್ಲಿನ ಮಠದ ಆಸ್ತಿ ಬರೆದುಕೊಡಲಾಗಿತ್ತು ಎನ್ನುವ ಹಿಂದಿನ ಸಂಗತಿಗಳೇ ಈಗ ಅಪ್ರಸ್ತುತ ಎಂದು ಇಲ್ಲಿನ ರಾಯರ ಮಠದ ಭಕ್ತರು ವಾದಿಸಿದರು.
ತಾವು ತಂಗಿದ್ದ ಸ್ಥಳಕ್ಕೆ ಬಂದ ಕೊಪ್ಪಳ ರಾಯರ ಮಠದ ಪ್ರಧಾನ ಅರ್ಚಕ ರಘು ಪ‍್ರೇಮಾಚಾರ್, ವ್ಯವಸ್ಥಾಪಕ ಜಗನ್ನಾಥ ಹುನಗುಂದ ಸೇರಿದಂತೆ ಅನೇಕರ ಜೊತೆ ಮಾತನಾಡಿದ ಸುಬುಧೇಂದ್ರ ಶ್ರೀಗಳು ’ಕೊಪ್ಪಳದ ರಾಯರ ಮಠದ ಸಂಪೂರ್ಣ ಅಧಿಕಾರವನ್ನು 1971ರಲ್ಲಿಯೇ ಮಂತ್ರಾಲಯ ಪೀಠಕ್ಕೆ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿಯಿವೆ. ಮಠ ಸುಸೂತ್ರವಾಗಿ ನಡೆದುಕೊಂಡು ಹೋಗಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಳ್ಳುವಂತೆ ಮಾತ್ರ ಹೇಳಿದ್ದೇನೆ. ಅಷ್ಟಕ್ಕೆ ಕೊಪ್ಪಳದ ಮಠವನ್ನು ಮಂತ್ರಾಲಯದ ಪೀಠಕ್ಕೆ ಅಪಹರಿಸಿಕೊಂಡು ಹೋಗಲಾಗುತ್ತಿದೆ ಎಂದು ಬಿಂಬಿಸುತ್ತಿರುವುದು ಸರಿಯಿಲ್ಲ. ಈಗಿರುವ ವ್ಯವಸ್ಥಾಪಕ ಜಗನ್ನಾಥ ಹುನಗುಂದರೇ ಮುಂದುವರಿಯಲಿ’ ಎಂದು ಹೇಳಿದ ಬಳಿಕ ಸಮಾಧಾನದಿಂದ ಇಲ್ಲಿನ ಭಕ್ತರು ವಾಪಸ್ ಮಠಕ್ಕೆ ತೆರಳಿದರು.
*ಸುಬುಧೇಂದ್ರ ಶ್ರೀ ಭಾಷಣದಲ್ಲಿ ಹೇಳಿದ್ದೇನು?*
ಜಿಲ್ಲಾ ಕೇಂದ್ರದಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠ ಅನೇಕ ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದು, ಇದು ಅತ್ಯಂತ ದೊಡ್ಡ ಶ್ರದ್ಧಾ ಕೇಂದ್ರವಾಗಿದೆ. ರಾಯರ ಮೂಲ ಮೃತಿಕಾ ಬೃಂದಾವನ ಹೊಂದಿದೆ. ಮುಂದೆಯೂ ಮಠವನ್ನು ಸುರಕ್ಷಿತವಾಗಿ, ಮಠದ ಪರಂಪರೆ ಹಾಗೂ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ಅಪಚಾರ ಆಗಬಾರದು. ದೊಡ್ಡ ಮಹಾನುಭಾವರಾದ ರಾಘವೇಂದ್ರ ಸ್ವಾಮಿಗಳು ಇಲ್ಲಿ ಬಂದು ಕುಳಿತಿದ್ದಾರೆ. ಈ ಕಾರಣಕ್ಕೆ 1971ರಲ್ಲಿ ಹುಲಿಗಿ ಆಚಾರ್ಯ ಮನೆತನದವರು ಮಂತ್ರಾಲಯದ ಮಠಕ್ಕೆ ಕೊಪ್ಪಳ ಮಠದ ಎಲ್ಲ ಜವಾಬ್ದಾರಿಯನ್ನು ದಾನ ನೀಡಿದ್ದಾರೆ. ಮಂತ್ರಾಲಯ ಮಠದ ಹಿಂದಿನ ಶ್ರೀಗಳು ಕೂಡ ಕೊಪ್ಪಳದ ಮಠದಲ್ಲಿಯೇ ಪೂಜೆ ಮಾಡಿದ್ದಾರೆ.
ಇಷ್ಟೆಲ್ಲ ಅಧಿಕಾರ ನಮಗಿದ್ದರೂ ಕೊಪ್ಪಳ ಮಠದ ವಿಷಯದಲ್ಲಿ ಮಂತ್ರಾಲಯದ ಆಡಳಿತ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮಠಕ್ಕೆ ಸೇರಿದ ಸಂಸ್ಥೆ ಚೆನ್ನಾಗಿ ನಡೆಯಬೇಕು ಎನ್ನುವ ಕಾಳಜಿ ನಮ್ಮದು. ಮಠದ ಪೀಠಾಧಿಪತಿಯಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಜಗತ್ತಿನಲ್ಲಿ ಎಲ್ಲಿಯೇ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಮೃತಿಕಾ ಬೃಂದಾವನವಿದ್ದರೂ ಅದು ಮಠದ ಆಸ್ತಿಯೇ. ಇದನ್ನು ಕಾನೂನಾತ್ಮವಾಗಿಯೂ ಗಮನಿಸಬೇಕು. ಮೃತಿಕಾ ಎನ್ನುವುದು ಸಾರ್ವಕಾಲಿಕವಾದ ಮಠದ ಸ್ವತ್ತು. ಬೃಂದಾವನ ಯಾರು ಎಲ್ಲಿಯೇ ಪ್ರತಿಷ್ಠಾಪನೆ ಮಾಡಿದರೂ ಮಠದ ಸಂಪ್ರದಾಯ ಪಾಲಿಸುತ್ತೇವೆ ಎಂದು ಬರೆದುಕೊಡಬೇಕು.
ಹಿಂದೆ ಬೆಂಗಳೂರಿನ ತ್ಯಾಗರಾಜದಲ್ಲಿ ರಾಯರ ಬೃಂದಾವನ ನಿರ್ಮಿಸಿದ ಬಳಿಕ ಅದನ್ನು ಎಲ್ಲೆಂದರಲ್ಲಿ ಬೀಸಾಡಿ ಆ ಕಟ್ಟಡದಲ್ಲಿ ಈಗ ಅಪಾರ್ಟ್‌ಮೆಂಟ್ ಕಟ್ಟಲಾಗಿದೆ. ಅಲ್ಲಿ ಆದ ಹಾಗೆ ಇಲ್ಲಿಯೂ ಆಗಬಾರದು ಎನ್ನುವುದಷ್ಟೇ ನನ್ನ ಕಾಳಜಿ. ಆದ್ದರಿಂದ ಇಲ್ಲಿನ ಮಠ ಅಭಿವೃದ್ಧಿ ಆಗಬೇಕು. ವ್ಯಕ್ತಿ ಶಾಶ್ವತ ಅಲ್ಲ, ಸಂಸ್ಥೆ ಮುಖ್ಯ. ಈ ಮಠವನ್ನು ಮಂತ್ರಾಲಯಕ್ಕೆ ಕೊಂಡೊಯ್ಯವ ಉದ್ದೇಶವಿಲ್ಲ. ಅಭಿವೃದ್ಧಿ ಮಾತ್ರ ಏಕೈಕ ಕಾಳಜಿಯಾಗಿದೆ.
*ಏಕಾಏಕಿ ಮಧ್ಯರಾತ್ರಿಯಲ್ಲಿ ಪ್ರತಿಭಟನೆ:*
ಕೊಪ್ಪಳದ ರಾಯರ ಮಠದ ಭಕ್ತರು ಏಕಾಏಕಿ ಮಧ್ಯರಾತ್ರಿಯಲ್ಲಿ ಪ್ರತಿಭಟನೆ ನಡೆಸಿದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಬುಧೇಂದ್ರ ಶ್ರೀಗಳು ‘ಕೊಪ್ಪಳದ ರಾಯರ ಮಠದಲ್ಲಿ ಪ್ರವಚನ ನೀಡುವಾಗ ನಾನು ಆಡಿದ ಮಾತುಗಳಿಂದ ಆತಂಕಗೊಂಡು ಇಲ್ಲಿನ ಭಕ್ತರು ಸ್ಪಷ್ಟೀಕರಣ ಪಡೆದುಕೊಳ್ಳಲು ಬಂದಿದ್ದರು. ನನಗೆ ವೈಯಕ್ತಿವಾಗಿ ಯಾರ ಮೇಲೂ ದ್ವೇಷ, ಅಸೂಯೆಗಳು ಇಲ್ಲ. ಮಂತ್ರಾಲಯ ಮಠದ ಹಿಂದಿನ ಪೀಠಾಧಿಕಾರಿಗಳು ಕೊಪ್ಪಳದ ರಾಯರ ಮಠಕ್ಕೆ ಬಂದು ಪೂಜೆ ನೆರವೇರಿಸಿದ್ದಾರೆ. ಈ ವಿಚಾರವಾಗಿ ಮಂತ್ರಾಲಯ ಮಠದ ಹಾಗೂ ಜನರ ಜೊತೆ ಚರ್ಚಿಸಿಯೇ ಮುಂದಿನ ತೀರ್ಮಾನ ಮಾಡುತ್ತೇನೆ ಹೊರತು ನಮ್ಮ ಪೀಠ ಭಕ್ತರ ವಿರುದ್ಧ ದಬ್ಬಾಳಿಕೆಯ ಹೆಜ್ಜೆ ಇರಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.