ಇತ್ತೀಚಿನ ಸುದ್ದಿ
ಕೋಲಾರ ಕಾಂಗ್ರೆಸ್ ಬಣ ರಾಜಕೀಯ: ಅಂತರ ಕಾಪಾಡಿಕೊಂಡ ಕೆ.ಎಚ್.ಮುನಿಯಪ್ಪ ಬೆಂಬಲಿಗರು
15/11/2022, 10:37
ಶಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಕೋಲಾರ ಜಿಲ್ಲಾ ಕಾಂಗ್ರೆಸ್‌ನ ರಮೇಶ್ ಕುಮಾರ್ ಬಣದ ಮುಖಂಡರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲಿ ಹೆಚ್ಚಿನ ಉತ್ಸಾಹದಿಂದ ತೊಡಗಿಕೊಂಡರೆ, ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಅಂತರವನ್ನು ಕಾಪಾಡಿಕೊಂಡರು.
ನಿಗದಿತ ಕಾರ್ಯಕ್ರಮದಂತೆ ಸಿದ್ದರಾಮಯ್ಯವನ್ನು ಕೋಲಾರದ ಬಂಗಾರಪೇಟೆ ವೃತ್ತದಲ್ಲಿ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಮತ್ತು ದಲಿತ ಸಂಘಟನೆಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿ , ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೋಲಾರದ ಮುಂದಿನ ಶಾಸಕ ಸಿದ್ದರಾಮಯ್ಯ , ಕೆ.ಎಚ್.ಮುನಿಯಪ್ಪರಿಗೆ ಜೈ ಎಂಬಿತ್ಯಾದಿಯಾಗಿ ಘೋಷಣೆಗಳನ್ನು ಮೊಳಗಿಸಿದರ. ಬೃಹತ್ ಹಾರವನ್ನು ಸಿದ್ದರಾಮಯ್ಯರಿಗೆ ಹಾಕಿ , ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಿದರು.
ಈ ಕಾರ್ಯಕ್ರಮದ ನಂತರ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಸಿದ್ದರಾಮಯ್ಯರೊಂದಿಗೆ ತೆರಳದೆ ತಟಸ್ಥವಾಗಿ ಉಳಿದುಕೊಂಡರು. ಯಥಾ ಪ್ರಕಾರ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದ ರಮೇಶ್ ಕುಮಾರ್ ಬಣದ ಕಾರ್ಯಕರ್ತರು , ಮುಖಂಡರು ಸಿದ್ದರಾಮಯ್ಯರ ಇಡೀ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಾಗೆಯೇ ಕೋಲಾರ ಜಿಲ್ಲಾ ಕುರುಬರ ಸಂಘದ ಪ್ರಮುಖ ಪದಾಧಿಕಾರಿಗಳು ಸಮುದಾಯದ ಮುಖಂಡ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದರೂ ಕನಕ ಮಂದಿರ ಬಳಿ ಸ್ವಾಗತ ಕೋರುವ ಸಂದರ್ಭದಲ್ಲಿ ಹಾಜರಿರದೆ , ತಾವು ವರ್ತೂರು ಪ್ರಕಾಶ್ ಜತೆ ನಿಂತಿರುವುದನ್ನು ದೃಢಪಡಿಸಿಕೊಂಡರು. ರಮೇಶ್‌ಕುಮಾರ್ ಗುಂಪಿನಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುತ್ತಿದ್ದ ಮುಳಬಾಗಿಲಿನ ಕೊತ್ತೂರು ಮಂಜುನಾಥ್ ,ಸಿದ್ದರಾಮಯ್ಯರ ಸ್ವಾಗತಿಸುವ ಯಾವುದೇ ಸಭೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ .ಪೂರ್ವಸಿದ್ಧತಾ ಸಭೆಗಳಲ್ಲಿಯೂ ಪಾಲ್ಗೊಂಡಿರಲಿಲ್ಲ . ಹಾಗೆಯೇ ಭಾನುವಾರ ಸಿದ್ದರಾಮಯ್ಯಕೋಲಾರ ಭೇಟಿ ಸಂದರ್ಭದಲ್ಲಿಯೂ ಗೈರು ಹಾಜರಾಗಿದ್ದ ಗಮನ ಸೆಳೆಯಿತು . ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿತು .