ಇತ್ತೀಚಿನ ಸುದ್ದಿ
Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ
06/09/2025, 20:15

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಇತ್ತೀಚಿನ ದಿನಗಳಲ್ಲಿ ಕುಶಾಲನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶ್ರೀಗಂಧ ಮರಗಳ ಚೋರರ ಹಾವಳಿ ಹೆಚ್ಚಾಗಿದೆ. ಮರಗಳು ಇದ್ದಕ್ಕಿದ್ದ ಹಾಗೆ ಮಾಯವಾಗುತ್ತಿದೆ.
ಆಗಸ್ಟ್ 31ರಂದು ರಾತ್ರಿ ಗುಮ್ಮನ ಕೊಲ್ಲಿಯ ನಂದಿ ಬಡಾವಣೆಯಲ್ಲಿ ನಿವಾಸಿಯೊಬ್ಬರ ಮನೆಯ ಕಾಂಪೌಂಡನ್ನು ಒಡೆದು ಅಲ್ಲಿದ್ದ ಶ್ರೀಗಂಧದ ಮರವನ್ನು ಕಳ್ಳರು ಕಳ್ಳತನ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ..
ಕುಶಾಲನಗರ ಸುತ್ತ ಮುತ್ತಲಿನಲ್ಲಿರುವ ತೋಟ, ಹೊಲ, ಬೇಲಿಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಕತ್ತರಿಸಿ ಕಳ್ಳತನ ಮಾಡುತ್ತಿದ್ದಾರೆ. ಈ ಕಳ್ಳರ ದುರಾಸೆ ಎಷ್ಟಿದೆ ಅಂದರೆ, ತಿರುಳೇ, (ಚೇಗು) ಕಟ್ಟದ ಚಿಕ್ಕ ಚಿಕ್ಕ ಎಳೆಯ ಮರಗಳಿಗೆ ಗರಗಸ ಹಾಕಿ ಕತ್ತರಿಸಿ ಶ್ರೀಗಂಧವನ್ನು ಸರ್ವನಾಶ ಮಾಡುತ್ತಿದ್ದಾರೆ. ಯಾವುದೇ ರೀತಿಯ ಭಯ ಭೀತಿ ಇಲ್ಲದ ಇವರು, ಗಂಧದ ಮರಗಳು ಮುಗಿದ ಮೇಲೆ ಮುಂದಿನ ದಿನಗಳಲ್ಲಿ ಮನೆ ಮನೆಗಳಿಗೂ ಕನ್ನ ಹಾಕಲು ಹೇಸುವುದಿಲ್ಲ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಜಂಟಿ ಕಾರ್ಯಾಚರಣೆ ನಡೆಸಿ ಶ್ರೀಗಂಧ ಮರ ಚೋರರನ್ನು ಸದೆಬಡೆಯುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.