ಇತ್ತೀಚಿನ ಸುದ್ದಿ
Kodagu | ‘ಹುಡುಗಿ, ಆಂಟಿ ಸರ್ವಿಸ್…’ ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ: ಮಡಿಕೇರಿ ಪೊಲೀಸರು ಹೆಣೆದ ಜಾಲಕ್ಕೆ ಬಿದ್ದು ಬಿಟ್ಟ!
30/08/2025, 22:58

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಕೊಡಗು ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದ ಆರೋಪಿಯೋರ್ವ ಮಡಿಕೇರಿ ಪೋಲಿಸರು ಹೆಣೆದ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾನೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಬೆಳಗಲಿ ಗ್ರಾಮದ ನಿವಾಸಿ ನಾಗಪ್ಪ ಹನುಮಂತ ಲಮಾಣಿ (26) ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ.
ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಗಾವಲು ತಂಡವು ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಇನ್ಸ್ಟಾಗ್ರಾಂ ನ Kotya-2026 ಎಂಬ ಖಾತೆಯಲ್ಲಿ ಮಡಿಕೇರಿ ಕೆ.ಎಸ್.ಆರ್.ಟಿ. ಸಿ. ಬಸ್ ನಿಲ್ದಾಣದ ವಿಡಿಯೋ ಬಳಸಿಕೊಂಡು “ಮಡಿಕೇರಿ ಜಿಲ್ಲೆಯಲ್ಲಿ ಎಲ್ಲಿ ಹುಡುಗಿ ಆಂಟಿ ಡೇಟಿಂಗ್ ಮಾಡಲಿಕ್ಕೆ ಸರ್ವಿಸ್ ಬೇಕಾದ್ರೆ ಕಾಲ್ ಮಾಡಿ 8904088873” ಎಂಬುದಾಗಿ ಅಪ್ ಲೋಡ್ ಮಾಡಿದ್ದ ವಿಡಿಯೋ
ಕಂಡು ಬಂದಿತ್ತು. ಇದು ಕೊಡಗು ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವ ರೀತಿಯಲ್ಲಿದ್ದುದರಿಂದ ಈ ಕುರಿತು
ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ 318(4), 78 BNS & 66(ಇ) 67 ಐ.ಟಿ. Act & 6 Indecent Representation of Women (Prohibition) Act & Immoral Traffic (Prevention) Act ಅಡಿಯಲ್ಲಿ ಪೊಲೀಸ್ ಇಲಾಖೆಯಿಂದ ಸುಮೊಟೊ ಪ್ರಕರಣವನ್ನು ದಾಖಲಿಸಲಾಗಿತ್ತು.
ಪ್ರಕರಣದ ಆರೋಪಿಯ ಪತ್ತೆಗಾಗಿ ಮಡಿಕೇರಿ ಪೊಲೀಸ್ ಉಪ ವಿಭಾಗದ ಡಿ.ಎಸ್.ಪಿ. ಸೂರಜ್, ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರಾದ ರಾಜು ಪಿ.ಕೆ. ಮತ್ತು ಸಬ್ ಇನ್ಸ್ ಪೆಕ್ಟರ್ ಅನ್ನಪೂರ್ಣ ಹಾಗೂ ಸಿಬ್ಬಂದಿಗಳು ತನಿಖೆ ಕೈಗೊಂಡು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಬೆಳಗಲಿ ಗ್ರಾಮದ ನಿವಾಸಿ ನಾಗಪ್ಪ ಹನುಮಂತ ಲಮಾಣಿ (26) ಎಂಬಾತನನ್ನು ತಾರೀಖು 30-08-2025 ರಂದು ಪತ್ತೆ ಮಾಡಿ ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದಾರೆ.
*ಶ್ಲಾಘನೆ:* ಈ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಬಿ.ಪಿ. ದಿನೇಶ್ ಕುಮಾರ್ ಶ್ಲಾಘಿಸಿದ್ದಾರೆ.