ಇತ್ತೀಚಿನ ಸುದ್ದಿ
Kodagu | ಕಾಫಿ ವರ್ಕ್ಸ್ ನಲ್ಲಿ 7 ಸಾವಿರ ಕೆಜಿ ಕಾಫಿ ಕಳ್ಳತನ: 5 ಮಂದಿ ಆರೋಪಿಗಳ ಬಂಧನ
03/09/2025, 11:03

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ತಾಲ್ಲೂಕಿನ ಕೂಡ್ಲುರು ಕೈಗಾರಿಕಾ ಪ್ರದೇಶದಲ್ಲಿರುವ ಉಮಾ ಕಾಫಿ ವರ್ಕ್ಸ್ ನಲ್ಲಿ ಅಂದಾಜು ಏಳು ಸಾವಿರ ಕೆಜಿ ಕಾಫಿ ಕಳ್ಳತನ ಮಾಡಿದ್ದ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಕಾಫಿ ವರ್ಕ್ಸ್ ನಲ್ಲಿ ಅಂದಾಜು ಏಳು ಸಾವಿರ ಕೆಜಿ ಕಾಫಿ ಕಳ್ಳತನವಾಗಿದ್ದ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ 306, 3(5) BNS Act ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಪೊಲೀಸ್ ಉಪ ವಿಭಾಗದ ಡಿಎಸ್ ಪಿ ಚಂದ್ರಶೇಖರ್, ಕುಶಾಲನಗರ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರ ಮತ್ತು ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಬೈಲುಕುಪ್ಪೆ ಗ್ರಾಮದ ಸುನೀಲ್ ಆರ್ (34), ರಾಜು ಆರ್ (24), ಶರತ್ (24), ಬಿಹಾರ ರಾಜ್ಯ ಪಶ್ಚಿಮ ಚಂಪಾರಣ್ ಜಿಲ್ಲೆ ಮೂಲದ ದಿನೇಶ್ ರಾವತ್ (44) ಮತ್ತು ಬಿಹಾರ ರಾಜ್ಯ ಪೂರ್ವ ಚಂಪಾರಣ್ ಜಿಲ್ಲೆ ಮೂಲದ ಜಿತೇಂದ್ರ ಕುಮಾರ್ ರಾಮ್ (38) ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿಗಳಿಂದ 6495 ಕೆಜಿ ಕಾಫಿ, ಒಂದು ಕಾರು, ಎರಡು ದ್ವಿ ಚಕ್ರ ವಾಹನ ಮತ್ತು ಒಂದು ಆಟೋ ರಿಕ್ಷಾವನ್ನು ವಶ ಪಡಿಸಿಕೊಳ್ಳಲಾಗಿದೆ.