ಇತ್ತೀಚಿನ ಸುದ್ದಿ
ಕೇರಳದಲ್ಲಿ ಅಬ್ಬರದ ಪೂರ್ವ ಮುಂಗಾರು ವರ್ಷಧಾರೆ: ಕೊಚ್ಚಿಯ ಐಟಿ ಟೆಕ್ ಪಾರ್ಕ್ ಜಲಾವೃತ, ಗುರುವಾಯೂರು ದೇಗುಲಕ್ಕೂ ನೀರು
23/05/2024, 13:03
ತಿರುವನಂತಪುರಂ(reporterkarnataka.com):ಕೇರಳಕ್ಕೆ ಜೂನ್ 1ರಂದು ಮುಂಗಾರು ಆಗಮಿಸಲಿದ್ದು, ಪೂರ್ವ ಮುಂಗಾರು ಹಿನ್ನೆಲೆಯಲ್ಲಿ ಮುಂದಿನ 24 ಗಂಟೆ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.
ಕೇರಳದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್, 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಧ್ಯ ಮತ್ತು ಉತ್ತರ ಕೇರಳದಾದ್ಯಂತ ಭಾರೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಮುಂಗಾರು ಅಬ್ಬರ ಕೇರಳದಲ್ಲಿ ಈಗಾಗಲೇ ಜೋರಾಗಿದ್ದು, ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊಚ್ಚಿಯ ಐಟಿ ಟೆಕ್ ಪಾರ್ಕ್ ಜಲಾವೃತ ಗೊಂಡಿದೆ. ಆಫೀಸ್ ಒಳಭಾಗದಲ್ಲಿ ನೀರು ನಿಂತಿದ್ದು, ಪರಿಣಾಮ ಟೆಕ್ಕಿಗಳು ಪರದಾಡಿದ್ದಾರೆ. ಗುರುವಾಯೂರು ಶ್ರೀಕೃಷ್ಣ ದೇವಸ್ಥಾನದ ಮುಂಭಾಗ ಕೂಡ ಜಲಾವೃತವಾಗಿದೆ. ಅಂಗಡಿಗಳಿಗೂ ನೀರು ನುಗ್ಗಿ ಅಸ್ತವ್ಯಸ್ತವಾಗಿತ್ತು.
ಪಾಲಕ್ಕಾಡ್ ಕಲ್ಲಡಿಕೋಡ್ ಎಂಬಲ್ಲಿ ಸಿಡಿಲು ಬಡಿದು ಮನೆಯ ಮೇಲ್ಛಾವಣಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಕರಿಂಬಾ ಅಯ್ಯಪ್ಪನಕೋಟ ಮಂಪುರಂ ನಿವಾಸಿ ಕಣ್ಣನ್ ಎಂಬವರ ಮನೆ ಬೆಂಕಿಗೆ ಆಹುತಿಯಾಗಿದೆ. ಮಂಪುರಂ ಮೂಲದ ರೆಗಿ ಮತ್ತು ಅವರ ಕುಟುಂಬ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿದ್ದ ಕಪಾಟುಗಳು, ಬೆಡ್‍ಗಳು ಇತ್ಯಾದಿಗಳು ಸುಟ್ಟು ಹೋಗಿವೆ.














