ಇತ್ತೀಚಿನ ಸುದ್ದಿ
ಕೇರಳ ಸ್ಫೋಟ ಪ್ರಕರಣ: ಘಟನೆಯ ಹೊಣೆ ಹೊತ್ತ ವ್ಯಕ್ತಿ ಪೊಲೀಸರಿಗೆ ಶರಣು; ವೀಡಿಯೊ ಹಂಚಿಕೊಂಡ ಆರೋಪಿ
30/10/2023, 15:57

ಕೊಚ್ಚಿ(reporterkarnataka.com): ಒಂದು ಸಾವು ಹಾಗೂ 45ಕ್ಕೂ ಅಧಿಕ ಮಂದಿ ಗಾಯಗೊಳ್ಳಲು ಕಾರಣವಾದ ಕೇರಳದ ಕೊಚ್ಚಿ ಸಮೀಪದ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಹೊತ್ತ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ.
48ರ ಹರೆಯದ ಡೊಮಿನಿಕ್ ಮಾರ್ಟಿನ್ ಪೊಲೀಸರಿಗೆ ಶರಣಾದ ವ್ಯಕ್ತಿ. ಈತ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ ಅದೇ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ.
ಮಾರ್ಟಿನ್ ವೀಡಿಯೊ ಮಾಡಿಕೊಂಡು ಅದನ್ನು
ಹಂಚಿಕೊಂಡಿದ್ದಾನೆ. ವೀಡಿಯೊದಲ್ಲಿ ಆತನು
ಹಲೋ, ನನ್ನ ಹೆಸರು ಮಾರ್ಟಿನ್. ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‌ನಲ್ಲಿ ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಬಾಂಬ್ ಸ್ಫೋಟ ಘಟನೆಗೆ ಬಗ್ಗೆ ನಿಮಗೆ ಸುದ್ದಿ ಸಿಕ್ಕಿರಬಹುದು. ಆ ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ.
ವೀಡಿಯೊದಲ್ಲಿ ಮಾತನಾಡಿದ ಅವನು, ಯಹೋವನ ಸಾಕ್ಷಿಗಳ ಗುಂಪಿನಲ್ಲಿ ನಾನು ಕಳೆದ 16 ವರ್ಷಗಳಿಂದ ಇದ್ದೇನೆ. ಆದರೆ ಕಳೆದ 6 ವರ್ಷಗಳ ಹಿಂದೆ ಈ ಪಂಗಡವು ತಪ್ಪಾದ ಪಂಗಡವೆಂದು ನನಗೆ ಅರಿವಾಯಿತು. ನೀವು ಬೋಧಿಸುತ್ತಿರುವ ವಿಚಾರಗಳು ತಪ್ಪು ಎಂದು ಸಂಬಂಧಪಟ್ಟವರಲ್ಲಿ ತಿಳಿಸಿದೆ. ಆದರೆ ಅವರು ಅದಕ್ಕೆ ಮನ್ನಣೆ ನೀಡಲಿಲ್ಲ. ಇವರು ಈ ದೇಶದಲ್ಲಿದ್ದುಕೊಂಡು ಈ ದೇಶದ ಜನರೊಂದಿಗೆ ಬೆರೆಯಬಾರದು, ಅವರೊಂದಿಗೆ ವ್ಯವಹರಿಸಬಾರದು ಎಂದು ಬೋಧಿಸುತ್ತಾರೆ ಎಂದು ಮಾರ್ಟಿನ್ ಆರೋಪಿಸಿದ್ದಾನೆ.
ಘಟನೆಯ ಸಂಪೂರ್ಣ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತಿದ್ದೇನೆ. ಪೊಲೀಸರಿಗೆ ಶರಣಾಗುತ್ತೇನೆ ಎಂದು ಹೇಳಿದ್ದಾನೆ.
ಕೊಚ್ಚಿಯಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿರುವ ಕಲಮಸ್ಸೆರಿಯ ಕೇಂದ್ರದಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು.