ಇತ್ತೀಚಿನ ಸುದ್ದಿ
Kerala | ಮಾವುತನ ತುಳಿದು ಕೊಂದ ಹರಿಪಾದ್ ಸುಬ್ರಹ್ಮಣ್ಯ ದೇವಸ್ಥಾನದ ಆನೆ: ಇನ್ನೊರ್ವ ಗಂಭೀರ
02/09/2025, 15:41

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್‌ನ ಸುಬ್ರಹ್ಮಣ್ಯ ದೇವಸ್ಥಾನದ ಆನೆಯು ರವಿವಾರ ಮಾವುತನೋರ್ವನನ್ನು ತುಳಿದು ಕೊಂದಿದ್ದು,ಇನ್ನೋರ್ವ ಮಾವುತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಮೃತ ಮಾವುತ ಮುರಳೀಧರನ್ ದೇವಸ್ಥಾನದ ಸ್ಕಂದನ್ ಹೆಸರಿನ ಆನೆಯನ್ನು ನೋಡಿಕೊಳ್ಳುತ್ತಿದ್ದರು.
ಕಳೆದ ಕೆಲವು ತಿಂಗಳುಗಳಿಂದ ಮದವೇರಿದ್ದ ಆನೆಯನ್ನು ದೇವಸ್ಥಾನದ ಅರ್ಚಕರ ಮನೆಯಲ್ಲಿ ಕಟ್ಟಿ ಹಾಕಲಾಗಿತ್ತು. ರವಿವಾರ ಮಧ್ಯಾಹ್ನ ವ್ಯಗ್ರಗೊಂಡಿದ್ದ ಆನೆಯು ಇನ್ನೋರ್ವ ಮಾವುತ ಸುನೀಲ್ ಕುಮಾರ್ ಮೇಲೆ ದಾಳಿ ನಡೆಸಿದ್ದು, ಸ್ಥಳಕ್ಕೆ ಧಾವಿಸಿದ ಮುರಳೀಧರನ್ ಅದನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಂತರ ಆನೆಯನ್ನು ದೇವಸ್ಥಾನಕ್ಕೆ ಸ್ಥಳಾಂತರಿಸುವಾಗ ಮತ್ತೆ ವ್ಯಗ್ರಗೊಂಡಿದ್ದ ಅದು ಮುರಳೀಧರನ್ ಮೇಲೆ ದಾಳಿ ನಡೆಸಿತ್ತು.
ಇತರ ಮಾವುತರು ಗಂಭೀರವಾಗಿ ಗಾಯಗೊಂಡಿದ್ದ ಮುರಳೀಧರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರಾದರೂ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುನೀಲ್ ಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.