ಇತ್ತೀಚಿನ ಸುದ್ದಿ
ಕೇಂದ್ರ ಸರಕಾರದ ವಿರುದ್ಧ ರಾಷ್ಟ್ರವ್ಯಾಪಿ ಕರಾಳ ದಿನ: ಮನೆ ಮನೆಯಲ್ಲಿ ಪ್ರತಿಭಟನೆ
26/05/2021, 19:32
ಮಂಗಳೂರು(reporterkarnataka news) : ಕೊರೊನ ಎರಡನೇ ಅಲೆಯು ದೇಶದಲ್ಲಿ ಅಪಾರ ಸಾವು- ನೋವುಗಳಿಗೆ ಕಾರಣವಾಗಿದೆ. ಕೊರೊನಾ ನಿಯಂತ್ರಿಸಿ ಲಸಿಕೆ ಹಂಚಿ ಜನರಿಗೆ ಧೈರ್ಯ ನೀಡಬೇಕಾಗಿದ್ದ ಪ್ರಧಾನ ಮಂತ್ರಿಗಳು ಮೊಸಳೆ ಕಣ್ಣೀರು ಸುರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಟೀಕಿಸಿದರು.
ಅವರು ಬುಧವಾರ (ಮೇ 26) ದೆಹಲಿ ರೈತರ ಹೋರಾಟಕ್ಕೆ 6 ತಿಂಗಳು ಮತ್ತು ರೈತ ವಿರೋಧಿ ಕೃಷಿ ಕಾನೂನು ವಾಪಾಸು ಪಡೆಯಲು ಮತ್ತು ಕೋವಿಡ್ ನಿಯಂತ್ರಿಸುವಲ್ಲಿ , ಜನರಿಗೆ ಪರಿಹಾರ ಕ್ರಮ ವಿತರಿಸುವಲ್ಲಿನ ವೈಫಲ್ಯದ ವಿರುದ್ದ ರಾಷ್ಟ್ರ ವ್ಯಾಪಿ ಕರಾಳ ದಿನದ ಹೋರಾಟಕ್ಕೆ ಬೆಂಬಲಾರ್ಥವಾಗಿ ಡಿವೈಎಫ್ಐ, ಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆಗಳ ಕೇಂದ್ರ ಸಮಿತಿಗಳ ಕರೆಯನ್ವಯ ಬುಧವಾರ ರಾಷ್ಟ್ರವ್ಯಾಪಿ ಮನೆ ಮನೆ ಪ್ರತಿಭಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ನಡೆಸಲಾಯಿತು.
ಕೇಂದ್ರ ರಾಜ್ಯ ಸರಕಾರಗಳು ಕೋವಿಡ್ ನಿಯಂತ್ರಿಸುವಲ್ಲಿ ಹಳಿ ತಪ್ಪಿವೆ. ಸರಕಾರದ ಸಾಲು ಸಾಲು ವೈಫಲ್ಯಗಳು ಘೋರವಾದ ಇತಿಹಾಸ ನಿರ್ಮಿಸುತ್ತಿದೆ. ಜನರು ಆಕ್ಸಿಜನ್, ಲಸಿಕೆ ಸಿಗದೆ ಸಾಯುತ್ತಿದ್ದಾರೆ. ಜನರ ನೆರವಿಗೆ ಬರಬೇಕಿದ್ದ ಸರಕಾರ ಮಕಾಡೆ ಮಲಗಿದೆ ಎಂದು ಸಂತೋಷ್ ಬಜಾಲ್ ಆರೋಪಿಸಿದರು.
ಡಿವೈಎಫ್ಐ, ಎಸ್ಎಫ್ಐ, ಜನವಾದಿ ಮಹಿಳಾ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗಳ ಅಧೀನದಲ್ಲಿರುವ ಎಲ್ಲಾ ಘಟಕಗಳ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಿಂದಲೇ ಕೇಂದ್ರ ಸರಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂದು ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ