ಇತ್ತೀಚಿನ ಸುದ್ದಿ
ಕಾಸರಗೋಡು: ದುಷ್ಕರ್ಮಿಗಳಿಂದ ರೈಲು ಹಳಿ ತಪ್ಪಿಸಲು ಯತ್ನ; ಹಾಗಾದರೆ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತೇ ಸಂಚು?
26/08/2022, 12:25
ಮಂಗಳೂರು(reporterkarnataka.com): ನೆರೆಯ ಕೇರಳದ ಕಾಸರಗೋಡಿನ ಬಳಿ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲನ್ನು ಹಳಿಗಳನ್ನು ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಇದರೊಂದಿಗೆ ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆದಿತ್ತೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಕಾಸರಗೋಡಿನ ಕೋಟಿಕುಳಂ ಮತ್ತು ಬೇಕಲ ಮಧ್ಯೆ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ಆಗಸ್ಟ್ 21ರಂದು ಕಬ್ಬಿಣ್ಣದ ಸರಳುಗಳು, ಕಾಂಕ್ರೀಟ್ ಇಟ್ಟು ರೈಲಿನ ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ. ರೈಲ್ವೆ ಗಾರ್ಡ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಹಳಿ ಮೇಲೆ 35 ಕೆಜಿ ಕಾಂಕ್ರೀಟ್ ತುಂಡು ಪತ್ತೆಯಾಗಿದೆ.
ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಕಳೆದ ಶನಿವಾರವೂ ಇಂತಹುದೇ ಕೃತ್ಯ ನಡೆದಿದ್ದು, ಚಿತ್ತಾರಿ ಎಂಬಲ್ಲಿ ಕೊಯಂಬತ್ತೂರು ಮಂಗಳೂರು ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದರು.