ಇತ್ತೀಚಿನ ಸುದ್ದಿ
ಖಾಸಗಿ ಸಾರಿಗೆ ಒಕ್ಕೂಟದಿಂದ ನಾಳೆ ಬೆಂಗಳೂರು ಬಂದ್: ರಾಜ್ಯ ಸರಕಾರದಿಂದ ಹೆಚ್ಚುವರಿ ಬಸ್ ಸೇವೆ
10/09/2023, 21:37

ಮೃದುಲಾ ನಾಯರ್ ಬೆಂಗಳೂರು
info.reporterkarnataka@gmail.com
ರಾಜ್ಯ ಸರಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದ ಸೆ.11ರ ಬೆಂಗಳೂರು ಬಂದ್ ಗೆ ಖಾಸಗಿ ಬಸ್, ಆಟೋ. ಕ್ಯಾಬ್ ಚಾಲಕರು ಬೆಂಬಲ ಸೂಚಿಸಿದ್ದು, ಈ ಮಧ್ಯೆ ಸಾರ್ವಜನಿಕರಿಗೆ ತೊಂದರೆ ಯಾಗದಂತೆ ಹೆಚ್ಚುವರಿ ಸರಕಾರಿ ಬಸ್ ಗಳನ್ನು ನಿಯೋಜಿಸಲು ಸರಕಾರ ನಿರ್ಧರಿಸಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬೆಂಗಳೂರು ಬಂದ್ಗೆ ಕರೆ ನೀಡಿದ್ದು, ಈಗಾಗಲೇ ಬಂದ್ಗೆ ಸಂಬಂಧಿಸಿದಂತೆ ಪ್ರಚಾರ ಕಾರ್ಯ ನಡೆದಿದೆ.
ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಮಧ್ಯರಾತ್ರಿವರೆಗೂ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಲು ಕರೆ ನೀಡಲಾಗಿದೆ.
ಬಂದ್ ಸಂದರ್ಭದಲ್ಲಿ ಆಟೋ, ಟ್ಯಾಕ್ಸಿ ಸಿಗದೇ ಜನ ಸಾಮಾನ್ಯರು ಕಷ್ಟ ಪಡಬಾರದು ಎಂದು ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಬಂದ್ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಬಸ್ ಕಾರ್ಯ ನಿರ್ವಹಣೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ. ಬಿಎಂಟಿಸಿ ಎಂಡಿ, ಕೆಎಸ್ಆರ್ಟಿಸಿ ಎಂಡಿ, ಸಾರಿಗೆ ಇಲಾಖೆಯ ಕಮಿಷನರ್ ಹಾಗೂ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವರು ಸಭೆ ನಡೆಸಿದ್ದಾರೆ.