ಇತ್ತೀಚಿನ ಸುದ್ದಿ
ಖಾಸಗಿ ಮೆಡಿಕಲ್ ಕಾಲೇಜಿನ ಪ್ರಯೋಗ ಶಾಲೆಯೇ ಸರಕಾರಿ ವೆನ್ಲಾಕ್ ಅಸ್ಪತ್ರೆ?: ಬಡ ರೋಗಿಗಳ ಜೀವಕ್ಕಿಲ್ಲ ಇಲ್ಲಿ ಬೆಲೆ!!
18/01/2022, 16:26
ಚಿತ್ರ :ಅನುಷ್ ಪಂಡಿತ್
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಪಳ ಪಳ ಹೊಳೆಯುವ ಗೋಡೆ, ಕನ್ನಡಿಯಂತೆ ಪ್ರತಿಫಲನ ಮಾಡುವ ನೆಲ, ಎಲ್ಲವೂ ಅಚ್ಚುಗಟ್ಟು, ಎಲ್ಲವೂ ಸುಂದರ, ನಯನ ಮನೋಹರ. ಇದು ಮಂಗಳೂರಿನ ಸರಕಾರಿ ಜಿಲ್ಲಾಸ್ಪತ್ರೆ ವೆನ್ಲಾಕ್ ನ ಚಿತ್ರಣ. ಆದರೆ ಬಡ ರೋಗಿಗಳು ಇಲ್ಲಿ ಚಿಕಿತ್ಸೆಗೆ ಹೋದರೆ ವಾಪಸ್ ಬರುವ ಗ್ಯಾರಂಟಿ ಮಾತ್ರ ಸ್ವಲ್ಪ ಕಡಿಮೆ. ರೋಗಿ ಪ್ರಭಾವಶಾಲಿಯಾಗಿದ್ದರೆ ಸಕಲ ಮರ್ಯಾದೆಯೊಂದಿಗೆ ಇಲ್ಲಿ ಆರೈಕೆ ಸಿಗುತ್ತದೆ. ರೋಗಿ ಕಡೆಯಿಂದ ಪ್ರಭಾವಿ ವ್ಯಕ್ತಿಗಳ ಕರೆ ಬಾರದಿದ್ದರೆ ಇಲ್ಲಿ ಯಾರೂ ಕ್ಯಾರೇ ಮಾಡುವುದಿಲ್ಲ.
ಶತಮಾನದ ಇತಿಹಾಸವಿರುವ ವೆನ್ ಲಾಕ್ ಆಸ್ಪತ್ರೆಗೆ ಲಕ್ಷಗಟ್ಟಲೆ ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ ಹೆಗ್ಗಳಿಕೆಯೂ ಇದೆ. ಇದರ ಜತೆಗೆ ಹಲವು ಕುಖ್ಯಾತಿಗಳನ್ನು ಕೂಡ ಇತ್ತೀಚಿಗಿನ ವರ್ಷಗಳಲ್ಲಿ ಅದು ಪಡೆಯುತ್ತಿದೆ. ಅಂತಹದೊಂದು ಘಟನೆ ಮೊನ್ನೆ ಮೊನ್ನೆ ನಡೆದಿದೆ. ನರರೋಗದ ಚಿಕಿತ್ಸೆಗಾಗಿ ಅರೆ ಪ್ರಜ್ಞಾವಸ್ಥೆಯಲ್ಲಿ ದಾಖಲಾಗಿದ್ದ ಕೇವಲ 44ರ ಹರೆಯದ ಬಡ ರೋಗಿಯೊಬ್ಬರು ತುರ್ತು ಚಿಕಿತ್ಸೆ ಪಡೆಯುವ ಬದಲು ಜನರಲ್ ವಾರ್ಡ್ ನಲ್ಲೇ ಸರಿಯಾದ ಚಿಕಿತ್ಸೆ ಲಭಿಸದೆ ಸಾವನ್ನಪ್ಪಿದ್ದಾರೆ. ಈ ಸಾವಿನ ಹೊಣೆಯನ್ನು ಜಿಲ್ಲಾಡಳಿತ ವಹಿಸುತ್ತದೆಯೇ?
ಏನು ಪ್ರಕರಣ?: ಜನವರಿ 12ರಂದು ಮಡಿಕೇರಿಯ ಚಂದ್ರ ಎಂಬವರನ್ನು ನರರೋಗಕ್ಕೆ ಸಂಬಂಧಿಸಿದ ಕಾಯಿಲೆಗೆ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ರೋಗಿಯನ್ನು ಪರೀಕ್ಷಿಸಿ, ಸಿ.ಟಿ.ಸ್ಕ್ಯಾನ್ ರಿಪೋರ್ಟ್ ನೋಡಿದ ವೈದ್ಯರು ರೋಗಿಗೆ ಎಂಆರ್‌ಐ ಸ್ಕ್ಯಾನ್ ಮಾಡಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ.
ಮಂಗಳೂರಿನ ಜಿಲ್ಲಾಸ್ಪತ್ರೆ ವೆನ್ಲಾಕ್ ಗೆ ಕರೆದುಕೊಂಡುಹೋಗಿ ಎಂದು ಬರೆದು ಕೊಡುತ್ತಾರೆ. ವೈದ್ಯರ ಸಲಹೆಯಂತೆ ರೋಗಿಯನ್ನು ಆ ಬಡ ಕುಟುಂಬ ವೆನ್ಲಾಕ್ ಆಸ್ಪತ್ರೆಗೆ ಜನವರಿ 12ರಂದು ರಾತ್ರಿ 8 ಗಂಟೆಗೆ ದಾಖಲಿಸುತ್ತಾರೆ. ರೋಗಿಯ ಅನಾರೋಗ್ಯದ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನೀಡಿದ ಸಿಟಿ ಸ್ಕ್ಯಾನ್ರಿ ರಿಪೋರ್ಟ್ ಮತ್ತು ಸುಳ್ಯದ ಆಸ್ಪತ್ರೆಯ ವೈದ್ಯರು ಬರೆದು ಕೊಟ್ಟಿರುವ ವರದಿಗಳನ್ನು ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ಕೊಡುತ್ತಾರೆ. ತುರ್ತು ಚಿಕಿತ್ಸೆಯ ಅಗತ್ಯವನ್ನು ಸಂಬಂಧಿಕರು ಸಿಬ್ಬಂದಿಗಳಿಗೆ ಮನವರಿಕೆ ಮಾಡಿದರೂ ರೋಗಿಯನ್ನು ಐಸಿಯು ದಾಖಲಿಸುವ ಬದಲು ಜನರಲ್ ವಾರ್ಡ್ ಗೆ ಹಾಕುತ್ತಾರೆ. ಇಷ್ಟೇ ಅಲ್ಲದೆ ಜನವರಿ 13ರ ಸಂಜೆಯವರೆಗೂ ಯಾವುದೇ ಪರಿಣತ ವೈದ್ಯರು ರೋಗಿಯ ಪರೀಕ್ಷೆ ನಡೆಸುವುದಿಲ್ಲ.
ಇದರ ಪರಿಣಾಮ ಐಸಿಯುನಲ್ಲಿ ತುರ್ತು ಚಿಕಿತ್ಸೆ ಪಡೆಯಬೇಕಾಗಿದ್ದ ಕೇವಲ 44ರ ಹರೆಯದ ಚಂದ್ರ ಅವರು ಜನವರಿ 13ರಂದು ಜನರಲ್ ವಾರ್ಡ್ ನಲ್ಲಿ ಶವವಾಗಿ ಮಲಗಬೇಕಾಗುತ್ತದೆ.
ಇಷ್ಟೇ ಅಲ್ಲದೆ ವೆನ್ಲಾಕ್ ಆಸ್ಪತ್ರೆಯ ಎಂ ಆರ್ ಐ ಸ್ಕ್ಯಾನಿಂಗ್ ಮೆಷಿನ್ ಹಾಳಾಗಿದ್ದು, ಐದಾರು ದಿನಗಳಿಂದ ಅದನ್ನು ದುರಸ್ತಿ ಮಾಡುವ ವ್ಯವಸ್ಥೆ ಕೂಡ ಮಾಡಿಲ್ಲ. ಚಂದ್ರ ಅವರು ಸಾವನ್ನಪ್ಪುವ ವರೆಗೂ ಎಂ ಆರ್ ಐ ಸ್ಕ್ಯಾನಿಂಗ್ ದುರಸ್ತಿಯಾಗಿಲ್ಲ. ಉನ್ನತ ಅಧಿಕಾರಿಯೊಬ್ಬರ ಸಂಬಂಧಿಕರಿಗೆ ಚಿಕಿತ್ಸೆ ನೀಡಲು ಜನರಲ್ ವಾರ್ಡ್ ನಲ್ಲಿ ಪುಟ್ಟ ಕ್ಯಾಬಿನನ್ನೇ ನಿರ್ಮಿಸಿರುವ ವೆನ್ಲಾಕ್ ಆಡಳಿತಕ್ಕೆ 5ರ ಹರೆಯದ ಪುಟ್ಟ ಕಂದನ ತಂದೆಯಾದ ಚಂದ್ರ
ಅವರ ಉಸಿರು ಉಳಿಸಲು ಎಂ ಆರ್ ಐ ಸ್ಕ್ಯಾನಿಂಗಿಗೆ ಬದಲಿ ವ್ಯವಸ್ಥೆ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.
ಬಡಜನರಿಗೆ ಉತ್ತಮ ಚಿಕಿತ್ಸೆ ಸಿಗಲಿ ಎನ್ನುವ ಉದ್ದೇಶದಿಂದ ಸರಕಾರವು ಆಯುಷ್ಮಾನ್ ಕಾರ್ಡ್ ಮುಖಾಂತರ ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿದೆ. ಆದರೆ ಈ ಸೌಲಭ್ಯ ರೋಗಿಗಳಿಗೆ ಸಿಗಬೇಕಾದರೆ ಸರಕಾರಿ ಆಸ್ಪತ್ರೆಯ ವೈದ್ಯರು ರೆಫರೆನ್ಸ್ ಲೆಟರ್ ಕೊಡಬೇಕು. ಆದರೆ ಇಲ್ಲಿನ ಅಧಿಕಾರಿಶಾಹಿ ವ್ಯವಸ್ಥೆ ಅದಕ್ಕೂ ಅಡ್ಡಗಾಲು ಹಾಕುತ್ತಿದೆ. ಚಂದ್ರ ಅವರ ಪ್ರಕರಣದಲ್ಲಿ ರೋಗಿಯ ಸಂಬಂಧಿಕರು ಅಂಗಲಾಚಿದರೂ ವೆನ್ಲಾಕ್‌ನ ವೈದ್ಯರು ರೆಫರೆನ್ಸ್ ಲೆಟರ್ ಕೊಟ್ಟಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿಗಳೇ ತುಂಬಿದ್ದು, ಇದೊಂದು ಪ್ರಯೋಗ ಶಾಖೆಯಾಗಿ ಪರಿವರ್ತನೆಗೊಂಡಿದೆ. ಸಕಾಲದಲ್ಲಿ ಇಲ್ಲಿ ತಜ್ಞ ವೈದ್ಯರು ಲಭ್ಯವಿರುವುದಿಲ್ಲ. ಮೂಲಗಳ ಪ್ರಕಾರ ನರ ಸಂಬಂಧಿಸಿದ ವೈದ್ಯರು ವೆನ್ಲಾಕ್ ಆಸ್ಪತ್ರೆಗೆ ಮೂರು ದಿನಕ್ಕೊಮ್ಮೆಮಾತ್ರ ಭೇಟಿ ನೀಡುತ್ತಿದ್ದಾರೆ. ನರ ಸಮಸ್ಯೆಯಿಂದ ಬಳಲುತ್ತಿರುವ ಬಡರೋಗಿಗಳು ಎಲ್ಲಿಯಾದರೂ ಬೇರೆ ದಿನ ತುರ್ತು ಚಿಕಿತ್ಸೆಗೆ ಬಂದರೆ ಸಾವು ಖಚಿತ ಎನ್ನುವುದು ಮಡಿಕೇರಿಯ ಚಂದ್ರ ಅವರ ಪ್ರಕರಣದಿಂದ ಸಾಬೀತಾಗಿದೆ.
ನನ್ನ ಮಾವ ಸಾವನ್ನಪ್ಪಲು ವೆನ್ಲಾಕ್ ಆಸ್ಪತ್ರೆಯ ವೈದ್ಯರೇ ಕಾರಣ. ಇಲ್ಲಿ ಸರಿಯಾದ ಚಿಕಿತ್ಸೆ ಇಲ್ಲ ಅಥವಾ ಐಸಿಯು ಇಲ್ಲ, ವೈದ್ಯರಿಲ್ಲ ಎಂದು ಹೇಳಿದ್ದರೆ ನಾವು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿದ್ದೆವು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಯುಷ್ಮಾನ್ ಶಿಫಾರಸ್ಸು ಪತ್ರ ಕೊಡಿ ಎಂದು ಇಲ್ಲಿನ ವೈದ್ಯರು, ಸಿಬ್ಬಂದಿಗಳ ಬಳಿ ಗೋಗರೆದರೂ ಅವರು ಕೊಡಲಿಲ್ಲ. ಇನ್ನು ಮುಂದೆ ಯಾವ ರೋಗಿಗಳಿಗೂ ಈ ರೀತಿ ಆಗಬಾರದು.
– ಶ್ರೀನಿವಾಸ್, ಮೃತಪಟ್ಟ ರೋಗಿಯ ಅಳಿಯ
ನಮ್ಮ ಯಜಮಾನರಿಗೆ ಸ್ಕ್ಯಾನ್, ಎಕ್ಸರೇ ಎಲ್ಲಾ ಮಾಡಿಸಿದ್ದೇವೆ. ಆದರೂ ಎಂಆರ್ ಐ ಸ್ಕ್ಯಾನ್ ಮಾಡಲು ವೈದ್ಯರು ಸೂಚಿಸಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಮಾಡಬೇಕಾದರೆ ದುಬಾರಿ ಹಣ ಕೊಡಲು ನಮ್ಮಲ್ಲಿ ಹಣ ಇಲ್ಲ. ಐದು ದಿನದಿಂದ ಕಾಯುತ್ತಿದ್ದೇವೆ. ಕೇಳಿದರೆ ರಿಪೇರಿ ಆಗುತ್ತಿದೆ. ಆಗದಿದ್ದರೆ ಹೊಸದೇ ಬರುತ್ತದೆ ಎನ್ನುತ್ತಿದ್ದಾರೆ. ಏನು ಮಾಡಬೇಕೋ ತೋಚುತ್ತಿಲ್ಲ.
– ಜಾನಕಿ, ಜನರಲ್ ವಾರ್ಡ್ ರೋಗಿಯ ಸಹಾಯಕಿ