ಇತ್ತೀಚಿನ ಸುದ್ದಿ
ಕೆಎಎಸ್ ಮರು ಪರೀಕ್ಷೆ ಕೋರ್ಟ್ ಆದೇಶದ ಮೇಲೆ ಅವಲಂಬಿತವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
12/03/2025, 23:48

ಬೆಂಗಳೂರು(reporterkarnataka.com):ಕೆಎಎಸ್ ಮರುಪರೀಕ್ಷೆ ಕೆಎಟಿ ಆದೇಶದ ಮೇಲೆ ಅವಲಂಭಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ
ಹೇಳಿದರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ವಿಪಕ್ಷಗಳ ನಾಯಕರು ಹಾಗೂ ಸದಸ್ಯರು ಕೆಎಎಸ್ ಪ್ರಶ್ನೆಪತ್ರಿಕೆಗಳ ಅನುವಾದಲ್ಲಿ ಉಂಟಾದ ಲೋಪದೋಷಗಳು, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಲ್ಲಿನ ವಿಳಂಬ ನೀತಿ ಕುರಿತಂತೆ ಕೇಳಲಾದ ಪ್ರಶ್ನೆಗಳಿಗೆ ಸುದೀರ್ಘವಾಗಿ ಉತ್ತರಿಸಿದ ಮುಖ್ಯಮಂತ್ರಿಗಳು, ಕೆಎಎಸ್ ಪ್ರಶ್ನೆಪತ್ರಿಕೆಯಲ್ಲಿನ ಭಾಷಾಂತರ ಲೋಪದೋಷ ಮರುಪರೀಕ್ಷೆಯಲ್ಲೂ ಕಂಡುಬಂದಿದ್ದು, ಅದನ್ನು ಅಭ್ಯರ್ಥಿಗಳು ಕೆಎಟಿ ಯಲ್ಲಿ ಪ್ರಶ್ನಿಸಿದ್ದಾರೆ. ಮರುಪರೀಕ್ಷೆ ಮಾಡಬೇಕೇ ಅಥವಾ ತರ್ಜುಮೆ ತಪ್ಪಾಗಿರುವ ಪ್ರಶ್ನೆಗಳಿಗೆ ಕೃಪಾಂಕ ನೀಡಬೇಕೆ ಎಂಬುದರ ಕುರಿತು ನ್ಯಾಯಾಲಯ ತೀರ್ಮಾನಿಸಬೇಕಾಗಿದೆ ಎಂದರು.
ಕೆಪಿಎಸ್ ಸಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಅದಕ್ಕೆ ಸಲಹೆ ಸೂಚನೆಗಳನ್ನು ನೀಡಬಹುದೇ ಹೊರತು ನೇರವಾಗಿ ಆದೇಶ ಮಾಡಲು ಸರ್ಕಾರಕ್ಕೆ ಅವಕಾಶ ಇರುವುದಿಲ್ಲ. ತರ್ಜುಮೆಯಲ್ಲಿನ ಲೋಪದೋಷಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಭಾಗದ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವುದನ್ನು ತಡೆಗಟ್ಟಲು ಸರಕಾರವು, ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲಿ ಸಿದ್ದಪಡಿಸಿ ನಂತರ ಆಂಗ್ಲಭಾಷೆಗೆ ತರ್ಜುಮೆ ಮಾಡುವಂತೆ ಕೆಪಿಎಸ್ ಸಿ ಗೆ ಸೂಚಿಸಿದೆ. ಜೊತೆಗೆ ಪ್ರಶ್ನೆಪತ್ರಿಕೆಯನ್ನು ತಪ್ಪಾಗಿ ಭಾಷಾಂತರ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಹ ಸೂಚಿಸಲಾಗಿದೆ. ಕೆಪಿಎಸ್ ಸಿ ಭ್ರಷ್ಟಾಚಾರ ರಹಿತವಾಗಿ, ಪಾರದರ್ಶಕವಾಗಿ ಹಾಗೂ ಮುಕ್ತವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ನುಡಿದರು.