5:41 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ

16/01/2025, 18:52

ಬೆಂಗಳೂರು(reporterkarnataka.com): ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ದೋಷಪೂರಿತ ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
2023-24ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ಮತ್ತೊಂದು ಬಾರಿ ಡಿಸೆಂಬರ್ 29ರಂದು ನಡೆದಿದೆ. ಇದರಲ್ಲಿ ಮತ್ತೊಮ್ಮೆ ಲೋಪದೋಷಗಳು ಕಂಡು ಬಂದಿದ್ದರಿಂದ ವಿಚಲಿತರಾಗಿರುವ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಮರುಪರೀಕ್ಷೆಯಲ್ಲಿ ಕಂಡು ಬಂದ ಲೋಪದೋಷಗಳ ಬಗ್ಗೆ ಅಭ್ಯರ್ಥಿಗಳು ಪದೇ ಪದೆ ಅಳಲು ತೋಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೂ ಸಹ ಈ ಕುರಿತು ವರದಿ ಮಾಡಿವೆ. ಆದರೆ ಮರುಪರೀಕ್ಷೆ ನಡೆದು ಹದಿನೈದು ದಿನ ಕಳೆದರೂ ಈವರೆಗೆ ಸರ್ಕಾರವಾಗಲೀ, ಆಯೋಗವಾಗಲೀ, ಅಭ್ಯರ್ಥಿಗಳ ಆಕ್ಷೇಪಣೆಗಳಿಗೆ ಉತ್ತರ ನೀಡಿಲ್ಲ. ಲಕ್ಷಾಂತರ ಯುವ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯಲ್ಲಾಗಿರುವ ಎಡವಟ್ಟುಗಳು, ಅದರಲ್ಲೂ ಮುಖ್ಯವಾಗಿ ಭಾಷಾಂತರದಲ್ಲಿ ಆಗಿರುವ ಲೋಪದೋಷಗಳ ದುಷ್ಪರಿಣಾಮವನ್ನು ಗ್ರಾಮೀಣ ಭಾಗದ ಯುವಕ ಯುವತಿಯರು ಎದುರಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕನ್ನಡ ಮಾಧ್ಯಮದಲ್ಲಿ ಶಾಲಾ, ಕಾಲೇಜು ವಿದ್ಯಾಭ್ಯಾಸ ಮಾಡಿರುವ ಸಾವಿರಾರು ಗ್ರಾಮೀಣ ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ. ಸರ್ಕಾರಿ ಅಧಿಕಾರಿಗಳಾಗಿ ಗ್ರಾಮೀಣ ಭಾಗದ ಜನರ ಸೇವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಪರೀಕ್ಷೆಗೆ ತಯಾರಿ ನಡೆಸಿದ ಅಭ್ಯರ್ಥಿಗಳ ಭವಿಷ್ಯ, ಕಾಂಗ್ರೆಸ್ ಸರ್ಕಾರದ ಎಡವಟ್ಟಿನಿಂದ ಕತ್ತಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಭ್ಯರ್ಥಿಗಳು ಬೇರೆ ದಾರಿ ಇಲ್ಲದೆ ಹೋರಾಟದ ಹಾದಿ ಹಿಡಿದಿದ್ದಾರೆ. ಸರ್ಕಾರ ಮತ್ತೊಮ್ಮೆ ದೋಷರಹಿತವಾಗಿ ಮರುಪರೀಕ್ಷೆ ನಡೆಸಬೇಕು ಅಥವಾ ಮುಖ್ಯಪರೀಕ್ಷೆಗೆ ಹಾಲಿ ಇರುವ 1:15 ಅನುಪಾತದ ಬದಲು 1:50 ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸರ್ಕಾರ ಅಭ್ಯರ್ಥಿಗಳನ್ನು ಕರೆಸಿ ಮಾತನಾಡಬೇಕಿತ್ತು. ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿತ್ತು. ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡುತ್ತೇವೆ, ಪ್ರಾಮಾಣಿಕ ಅಭ್ಯರ್ಥಿಗಳನ್ನು ಕೈ ಬಿಡುವುದಿಲ್ಲ ಎಂದು ಆಶ್ವಾಸನೆ ಕೊಟ್ಟು ಮನವೊಲಿಸಬೇಕಾಗಿತ್ತು. ಆದರೆ ಸರ್ಕಾರ ಇವ್ಯಾವುದನ್ನೂ ಮಾಡಿಲ್ಲ. ಎರಡೆರಡು ಬಾರಿ ಎಡವಟ್ಟು ಮಾಡಿದ್ದರೂ ತಪ್ಪೇ ನಡೆದಿಲ್ಲ ಎನ್ನುವ ಧೋರಣೆಯನ್ನು ಕಾಂಗ್ರೆಸ್ ಸರ್ಕಾರ ತೋರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಹೊಣೆಗಾರಿಕೆಯ ಪ್ರಶ್ನೆ:*
ಒಂದು ಕಡೆ ಅಭ್ಯರ್ಥಿಗಳ ಭವಿಷ್ಯದ ಪ್ರಶ್ನೆಯಾದರೆ ಮತ್ತೊಂದು ಹೊಣೆಗಾರಿಕೆಯ ಪ್ರಶ್ನೆ. ಎರಡೆರಡು ಬಾರಿ ಪರೀಕ್ಷೆ ನಡೆಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚವಾಗಿದೆ. ಆದರೂ ಪರೀಕ್ಷೆ ದೋಷಮುಕ್ತವಾಗಿಲ್ಲವೆಂದರೆ ಇದಕ್ಕೆ ಯಾರು ಹೊಣೆ? ಇದಕ್ಕೆ ಹೊಣೆಯಾದವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕಿತ್ತಲ್ಲವೇ? ಇದಕ್ಕೆ ಪ್ರಮುಖ ಕಾರಣರಾದ ಪರೀಕ್ಷಾ ನಿಯಂತ್ರಕರನ್ನು ಮುಂದುವರಿಸಲಾಗಿದೆ. ಮೊದಲ ಬಾರಿ ಎಡವಟ್ಟಾದ ನಂತರ ಅಕ್ಟೋಬರ್‌ 23 ರಂದು ಅವರಿಗಿಂತ ಹಿರಿಯರಾದ ಅಧಿಕಾರಿಯನ್ನು ಜಂಟಿ ಪರೀಕ್ಷಾ ನಿಯಂತ್ರಕ ಹುದ್ದೆಗೆ ನೇಮಿಸಲಾಗಿತ್ತು. ಅವರು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿಲ್ಲ. ನಿನ್ನೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ಇದು ಸರ್ಕಾರಕ್ಕೆ ಕೆಪಿಎಸ್ಸಿ ನೇಮಕಾತಿ ಬಗ್ಗೆ ಇರುವ ಕಾಳಜಿ ಎಂದು ಆರ್‌.ಅಶೋಕ ಕಿಡಿಕಾರಿದ್ದಾರೆ.
ಒಟ್ಟು 384 ಹುದ್ದೆಗಳ ಪೈಕಿ 40 ಎಸಿ ಹುದ್ದೆ ಇದೆ. ಇದು ಇದುವರೆಗಿನ ಅತಿ ಹೆಚ್ಚು ಎಂಬ ದಾಖಲೆಯಿದೆ. ಆಡಳಿತದ ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದ ಪ್ರಕ್ರಿಯೆಯಲ್ಲಿ ಇರಬೇಕಾದ ಗಂಭೀರತೆಯಾಗಲೀ, ಜವಾಬ್ದಾರಿಯಾಗಲೀ, ಈ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯ ಒಟ್ಟಾರೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ನ್ಯಾಯ ಸಮ್ಮತವಾಗಿರಬೇಕು ಮತ್ತು ಅರ್ಹರಿಗೆ ಮಾತ್ರ ಅವಕಾಶ ಸಿಗುವಂತಿರಬೇಕು ಎನ್ನುವುದು ನಮ್ಮ ಆಗ್ರಹ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು