ಇತ್ತೀಚಿನ ಸುದ್ದಿ
ಕರ್ತವ್ಯಕ್ಕೆ ತೆರಳುವ ಸೈನಿಕರಿಗೆ, ವಿದೇಶಕ್ಕೆ ತೆರಳುವ ಉದ್ಯೋಗಿಗಳಿಗೆ ಲಸಿಕೆ ನೋಂದಣಿ ಆರಂಭ: ಶಾಸಕ ವೇದವ್ಯಾಸ ಕಾಮತ್
05/06/2021, 19:20
ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಿಂದ ಉದ್ಯೋಗಕ್ಕಾಗಿ, ರಜೆಯಲ್ಲಿದ್ದು ವಾಪಸ್ಸು ಕರ್ತವ್ಯಕ್ಕೆ ತೆರಳುವ ಸೈನಿಕರಿಗೆ ಅಥವಾ ವಿಧ್ಯಾಭ್ಯಾಸಕ್ಕಾಗಿ ವಿದೇಶ, ಅನ್ಯರಾಜ್ಯಗಳಿಗೆ ತೆರಳುವವರಿಗೆ ಲಸಿಕೆ ವಿತರಣೆ ಕಾರ್ಯ ನಾಳೆ ನಗರದ ಡೊಂಗರಕೇರಿ ಕೆನರಾ ಗರ್ಲ್ಸ್ ಹೈಸ್ಕೂಲಿನಲ್ಲಿ ನಡೆಯಲಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಬಿಜೆಪಿ ಯುವಮೋರ್ಚಾ ಮಂಗಳೂರು ನಗರ ದಕ್ಷಿಣ ವತಿಯಿಂದ ಕೆಲ ದಿನಗಳ ಹಿಂದೆ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ನನಗೆ ಸೈನಿಕರಿಗೆ, ಉದ್ಯೋಗ ಮತ್ತು ವಿಧ್ಯಾಭ್ಯಾಸಕ್ಕಾಗಿ ವಿದೇಶ, ಅನ್ಯರಾಜ್ಯಗಳಿಗೆ ತೆರಳುವವರಿಗೆ ಲಸಿಕೆ ನೀಡುವ ಕುರಿತು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಸಂಸದರು ಹಾಗೂ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಅವರೊಂದಿಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು. ಇದಕ್ಕಾಗಿ ಆನ್ ಲೈನ್ http://dk.nic.in ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅಲ್ಲಿ ನೀಡಿರುವ ವಿಭಾಗಗಳಲ್ಲಿ ನೋಂದಾಯಿಸಿಕೊಂಡು ಬೇಕಾಗುವ ದಾಖಲೆಗಳನ್ನು ಭರ್ತಿ ಮಾಡಬೇಕು. ಆನಂತರ ಅರ್ಜಿ ಸಲ್ಲಿಸಿದವರಿಗೆ ದೂರವಾಣಿಯ ಮೂಲಕ ಲಸಿಕೆ ನೀಡುವ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಈ ಎಲ್ಲಾ ಚಟುವಟಿಕೆಗಳ ಪೂರ್ಣ ಜವಬ್ದಾರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಾರಾಗಿರುವ ಪ್ರಭಾಕರ್ ಶರ್ಮ ಅವರು ಹೊತ್ತಿದ್ದಾರೆ. ಹಂತ ಹಂತವಾಗಿ ಲಸಿಕೆ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ನನ್ನ ಕಚೇರಿಯನ್ನು, ಪ್ರಭಾಕರ್ ಶರ್ಮಾ ಅವರನ್ನು ಅಥವ ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರಾದ ಶಾಂತರಾಮ್ ಶೆಟ್ಟಿ ಅವರನ್ನು ಸಂಪರ್ಕಿಸಬಹುದು. ಅಗತ್ಯವಿರುವವರು ಕೂಡಲೇ ನೋಂದಾಯಿಸಿಕೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಮನವಿ ಸಲ್ಲಿಸಿದ್ದಾರೆ.