ಇತ್ತೀಚಿನ ಸುದ್ದಿ
ಕರಾವಳಿಯಲ್ಲಿ ಮೊಳಗಿದ ಎಎಪಿ ಧ್ವನಿ: ಮೂಡುಬಿದರೆ ಕ್ಷೇತ್ರದಿಂದ ಸಾಮಾಜಿಕ, ಧಾರ್ಮಿಕ ಮುಂದಾಳು ವಿಜಯನಾಥ ವಿಠಲ ಶೆಟ್ಟಿ ಕಣಕ್ಕೆ
23/03/2023, 13:28
ಮಂಗಳೂರು(reporterkarnataka.com): ಕರಾವಳಿಯಲ್ಲಿ ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಅಬ್ಬರದ ಧ್ವನಿ ಮೊಳಗಿದೆ. ವಿಧಾನಸಭೆ ಚುನಾವಣೆಗೆ ಎಎಪಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಜೈನಕಾಶಿ ಎಂದೇ ಪರಿಗಣಿಸಲಾದ ಪ್ರತಿಷ್ಠಿತ ಮೂಡುಬಿದಿರೆ ಕ್ಷೇತ್ರದಿಂದ ಸಾಮಾಜಿಕ, ಧಾರ್ಮಿಕ ದುರೀಣ, ಸಂಘಟಕ ವಿಜಯನಾಥ್ ವಿಠಲ ಶೆಟ್ಟಿ ಅವರು ಕಣಕ್ಕಿಳಿದಿದ್ದಾರೆ.
ವಿಜಯನಾಥ್ ವಿಠಲ ಶೆಟ್ಟಿ ಅವರದ್ದು ಬಹು ದೊಡ್ಡ ಹೆಸರು. ಇಡೀ ಕರಾವಳಿ ಯಾಕೆ, ನಾಡಿನುದ್ಧಗಲಕ್ಕೂ ಅವರು ಚಿರಪರಿಚಿತರು. ಉದ್ಯಮಿಯಾದ ವಿಜಯನಾಥ ಅವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಕೊಡುಗೆ ನೀಡಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಎತ್ತಿದ ಕೈ ಎಂದೇ ಪರಿಗಣಿಸಲಾದ ಅವರು ಬಡವರು, ನಿರ್ಗತಿಕರು, ಸಂಘ- ಸಂಸ್ಥೆಗಳಿಗೆ ತಾನು ದುಡಿದು ಸಂಪಾದಿಸಿದರಲ್ಲಿ ಬಹಳಷ್ಟು ಪಾಲು ನೀಡಿ ಕರಾವಳಿಗರ ಮನ ಗೆದ್ದಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿಯೂ ವಿಜಯನಾಥ ಅವರು ಬಹಳಷ್ಟು ಮುಂದಿದ್ದಾರೆ. ಶ್ರೀ ಭೂತನಾಥೇಶ್ವರ ಅವರ ಆರಾಧ್ಯ ದೈವ. ಇದರ ಜತೆಗೆ ಕರಾವಳಿಯ ದೇಗುಲ- ದೈವಸ್ಥಾನಗಳಿಗೆ ವಿಜಯನಾಥ ಅವರು ಸಾಕಷ್ಟು ದೇಣಿಗೆ ನೀಡಿ ತುಳುನಾಡಿನ ಪರಂಪರೆ ಎತ್ತಿ ಹಿಡಿದಿದ್ದಾರೆ. ಬಡ ಮಕ್ಕಳ ವಿದ್ಯಾರ್ಜನೆ ನೆರವು ನೀಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಸೇವೆ ನೀಡಿದ್ದಾರೆ. ಯಾರು ಸಹಾಯ ಕೇಳಿ ಬಂದರೂ ವಿಜಯನಾಥ ವಿಠಲ ಶೆಟ್ಟಿ ಅವರು ಬರಿಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇಲ್ಲ ಎಂದು ಅವರ ಆಪ್ತ ವಲಯದವರು ಹೇಳುತ್ತಾರೆ. ವಿಜಯನಾಥ ವಿಠಲ ಶೆಟ್ಟಿ ಅವರು ಮನೋರಂಜನೆ ಕ್ಷೇತ್ರದಲ್ಲಿಯೂ ಕೈಯಾಡಿಸಿದ್ದಾರೆ. ಜನರನ್ನು ನಕ್ಕು ನಗಿಸಿ ಹಗುರು ಮಾಡುವ ಕಾಮಿಡಿ ಶೋಗಳಿಗೆ ಜಡ್ಜ್ ಆಗಿ ಕಾಣಿಸಿಕೊಳ್ಖುತ್ತಾರೆ. ಜನತೆಗೆ ಕಾರ್ಯಕ್ರಮಕ್ಕೆ ಸ್ಪಾನ್ಸರ್ ಮಾಡುತ್ತಾರೆ.
ಇನ್ನು ವಿಜಯನಾಥ ವಿಠಲ ಶೆಟ್ಟಿ ಅವರಿಗೆ ರಾಜಕೀಯವೇನು ಹೊಸತೇನಲ್ಲ. ಅವರು ಈ ಹಿಂದೆಯೂ ರಾಷ್ಟ್ರೀಯ ಪಕ್ಷದಲ್ಲಿ ದುಡಿದು ಸಂಘಟನೆಯ ಚಾತುರ್ಯ ತೆ ಪಡೆದಿದ್ದಾರೆ. ರಾಜಕೀಯ ಪಕ್ಷಗಳ ಭ್ರಷ್ಟಾಚಾರ, ಅವ್ಯವಹಾರ, ಸ್ವಜನಪಕ್ಷಪಾತದಿಂದ ನೊಂದು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಇದೀಗ ಅವರು ಜೈನಕಾಶಿ ಎಂದೇ ಪರಿಗಣಿಸಲಾದ ಮೂಡುಬಿದರೆಯ ಪ್ರತಿಷ್ಠಿತ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದಾರೆ. ಎಎಪಿ ಈಗಾಗಲೇ ಮೂಡುಬಿದರೆ ಕ್ಷೇತ್ರದಿಂದ ತಳಮಟ್ಟದಿಂದಲೇ ಪಕ್ಷವನ್ನು ಸಂಘಟಿಸುತ್ತಾ ಬಂದಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿಯನ್ನು ಎಎಪಿ ನೀಡಲಿದೆ.














