ಇತ್ತೀಚಿನ ಸುದ್ದಿ
ಕಪಿಲಾ ನದಿಯಲ್ಲಿ ಏರುತ್ತಿರುವ ನೀರಿನ ಮಟ್ಟ: ನಂಜನಗೂಡು ಪರಶುರಾಮ ದೇಗುಲ ಜಲಾವೃತ
17/07/2024, 15:38
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕಪಿಲಾ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಾಗಿದ್ದರಿಂದ ಇಂದು ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನಲ್ಲಿ ಕಪಿಲಾ ನದಿ ತೀರದಲ್ಲಿರುವ ಪರಶುರಾಮ ದೇವಾಲಯ ಜಲಾವೃತಗೊಂಡಿದೆ. ಇದರೊಂದಿಗೆ ಶ್ರೀ ನಂಜುಂಡಸ್ವಾಮಿ ದೇವಾಲಯದ ಸ್ನಾನಘಟ್ಟ, ಮುಡಿಕಟ್ಟೆ ಸಹಾ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ.
ಮೈದುಂಬಿ ಹರಿಯುತ್ತಿರುವ ಕಪಿಲಾ ನದಿಯನ್ನು ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯ ಜನರು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಸ್ನಾನಘಟ್ಟದ ಬಳಿ ಆಗಮಿಸುತ್ತಿದ್ದು , ನದಿ ಬಳಿಗೆ ಜನರು ತೆರಳದಂತೆ ಪೊಲೀಸರು ಧ್ವನಿ ವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಿದ್ದರೂ ಆಗಮಿಸುತ್ತಿರುವ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಾಗುತ್ತಿದೆ.
ಹದಿನಾರು ಕಾಲು ಮಂಟಪ, ಪರಶುರಾಮ ದೇವಾಲಯದ ಬಳಿ ನದಿ ದಡದಲ್ಲಿ ಹಗ್ಗ ಕಟ್ಟಿ, ಬ್ಯಾರಿಕೇಡ್ ಹಾಕಿ ಅಪಾಯದ ಕುರಿತು ಸಂದೇಶ ನೀಡುವ ಮೂಲಕ ಜನರು ನದಿ ನೀರಿನಲ್ಲಿ ಮುಂದೆ ಸಾಗದಂತೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕ್ಷಣದಲ್ಲಿ ನೀರಿನ ಹೊರ ಹರಿವು ಹೆಚ್ಚಳವಾಗುವ ಸಾಧ್ಯತೆಯಿರುವುದರಿಂದ ನಗರದ ಹಳ್ಳದಕೇರಿ ನಿವಾಸಿಗಳಿಗೆ ನಗರಸಭೆಯಿಂದ ಮುನ್ನೆಚ್ಚರಿಕೆ ನೀಡಲಾಗಿದ್ದು , ಜೊತೆಗೆ ತಾತ್ಕಾಲಿಕ ಗಂಜಿ ಕೇಂದ್ರವನ್ನು ತೆರೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ.