ಇತ್ತೀಚಿನ ಸುದ್ದಿ
ಎಲ್ಲರನ್ನು ಒಪ್ಪಿಕೊಳ್ಳುವ ಜನರು ಕನ್ನಡಿಗರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
09/11/2025, 10:11
ಬೆಂಗಳೂರು:(reporterkarnataka.com): ಕರ್ನಾಟಕ ನೈಸರ್ಗಿಕವಾಗಿ ಎಷ್ಟು ಶ್ರೀಮಂತವಾಗಿದೆಯೋ ಕನ್ನಡಿಗರ ಹೃದಯವೂ ಅಷ್ಟೇ ಶ್ರೀಮಂತವಾಗಿದೆ. ಅದಕ್ಕಾಗಿ ಇಲ್ಲಿ ಬೇರೆ ರಾಜ್ಯಗಳಿಂದ ಬಂದವರಿಗೆ ಬೇರೆ ರಾಜ್ಯಕ್ಕೆ ಬಂದಿದ್ದೇವೆ ಎಂದು ಅನಿಸುವುದಿಲ್ಲ. ಎಲ್ಲರನ್ನು ಒಪ್ಪಿಕೊಳ್ಳುವ ಜನರು ಕನ್ನಡಿಗರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದಲ್ಲಿ ಪಾರ್ಕ್ವೆಸ್ಟ್ ನಿವಾಸಿಗಳು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶ ಬಹಳ ಇತಿಹಾಸ ಇರುವ ದೇಶ ನಮ್ಮ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ಐದು ಸಾವಿರ ವರ್ಷಕ್ಕಿಂತ ಮುಂಚಿನದು. ವಿಶ್ವದ ಅತ್ಯಂತ ಪ್ರಾಚೀನ ಸಂಸ್ಕೃತಿ ಮತ್ತು ನಾಗರಿಕತೆ ಭಾರತದ್ದು ಮಾನವನ ವಿಕಾಸ ಪ್ರಾರಂಭವಾಗಿದ್ದು ಭಾರತದಿಂದ ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಭಾಗ್ಯ. ಈ ಭಾರತ ದೇಶದಲ್ಲಿ ಕನ್ನಡ ನಾಡು ಎಲ್ಲಕ್ಕಿಂತ ಸುಸಂಸ್ಕೃತವಾಗಿರುವ ವಿದ್ಯಾವಂತರಿರುವ ಪ್ರಗತಿ ಬೆಳವಣಿಗೆ ಕಂಡಿರುವ ನಾಡು. ಕನ್ನಡ ಭಾಷೆ ಎರಡು ಸಾವಿರಕ್ಕಿಂತ ಹಳೆಯ ಭಾಷೆ ಅಂತ ಶಿಲಾ ಶಾಸನದಲ್ಲಿ ಗೊತ್ತಾಗಿದೆ. ಕನ್ನಡ ಒಂದು ಶಾಸ್ತ್ರೀಯ ಭಾಷೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ. ದೇಶದಲ್ಲಿ ಸಾಹಿತ್ಯಕ್ಕೆ ನೀಡುವ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದು ಕನ್ನಡ ನಾಡಿನ ಹಿರಿಯ ಸಾಹಿತಿಗಳು. ಒಂಭತ್ತು ಜನ ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದಾರೆ. ಇದರಿಂದ ಕನ್ನಡ ಭಾಷೆ ಎಷ್ಟು ಶ್ರೀಮಂತವಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.

ಕನ್ನಡ ನಾಡು ಬಹಳ ಶ್ರೀಮಂತ ನಾಡು. ಇಲ್ಲಿ ಉತ್ತರದಿಂದ ದಕ್ಷಿಣದವರೆಗೂ ನದಿಗಳು ಹರಿಯುತ್ತವೆ. ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುತ್ತವೆ. ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಮಲಪ್ರಭಾ, ಘಟಪ್ರಭಾ ಎಲ್ಲ ನದಿಗಳು ಕನ್ನಡ ನಾಡನ್ನು ಹಸಿರು ಮಾಡಿವೆ. ಕನ್ನಡ ನಾಡಿನಲ್ಲಿ ಬಹಳ ಶ್ರೀಮಂತವಾಗಿರುವ ಗಣಿ ಇದೆ. ಇಲ್ಲಿ ಅತ್ಯಂತ ಉತ್ತಮ ಗುಣಮಟ್ಟದ ಕಬ್ಬಿಣದ ಅದಿರು ಇದೆ. ಬಂಗಾರವೂ ಕೂಡ ಇಲ್ಲಿ ಸಿಗುತ್ತದೆ. ಅದಕ್ಕೆ ಇದನ್ನು ಚಿನ್ನದ ನಾಡು ಎಂದು ಕರೆಯುತ್ತಾರೆ. ಅರಣ್ಯದಿಂದ ಶ್ರೀಮಂತವಾಗಿದೆ. ಗಂಧದ ಗಿಡಗಳು ನೈಸರ್ಗಿಕವಾಗಿ ಕಾಡಿನಲ್ಲಿ ಬೆಳೆಯುತ್ತವೆ. ನೈಸರ್ಗಿಕವಾಗಿ ಎಷ್ಟು ಶ್ರೀಮಂತವಾಗಿದೆಯೋ ಕನ್ನಡಿಗರ ಹೃದಯವೂ ಅಷ್ಟೇ ಶ್ರೀಮಂತವಾಗಿದೆ. ಅದಕ್ಕಾಗಿ ಇಲ್ಲಿ ಬೇರೆ ರಾಜ್ಯಗಳಿಂದ ಬಂದವರಿಗೆ ಬೇರೆ ರಾಜ್ಯಕ್ಕೆ ಬಂದಿದ್ದೇವೆ ಎಂದು ಅನಿಸುವುದಿಲ್ಲ. ಎಲ್ಲರನ್ನು ಒಪ್ಪಿಕೊಳ್ಳುವ ಜನರು ಕನ್ನಡಿಗರು ಎಂದು ಹೇಳಿದರು.
ಇಲ್ಲಿಯ ಗಾಳಿ, ನೀರು, ಜನರು ನಿಮ್ಮನ್ನು ಕನ್ನಡಿಗರನ್ನಾಗಿ ಮಾಡುತ್ತದೆ. ನೀವು ಕನ್ನಡಿಗರಾಗುತ್ತೀರಿ, ಯಾವುದೇ ರಾಜ್ಯದವರು ಬಂದರೂ ನೀವು ನಮ್ಮವರೇ ನಿಮಗೂ ಇದು ನಮ್ಮ ರಾಜ್ಯ ಎಂದು ಒಪ್ಪಿಕೊಳ್ಳುತ್ತೀರಿ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ 1857 ರಲ್ಲಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಳು. ಆದರೆ, 1824 ರಲ್ಲಿಯೇ ಕಿತ್ತೂರು ರಾಣಿ ಚೆನ್ನಮ್ಮ ಬೀಟೀಷರ ವಿರುದ್ಧ ಹೋರಾಟ ಮಾಡಿ ಜಯ ಗಳಿಸಿದ್ದಳು. ನಾವು ಹೋರಾಟದಲ್ಲಿ ಜ್ಞಾನದಲ್ಲಿ, ತಂತ್ರಜ್ಞಾನದಲ್ಲಿ ಮುಂದಿದ್ದೇವೆ. ಭಾರತ ದೇಶದ ಭವಿಷ್ಯ ಉತ್ತಮ ಆಗಬೇಕೆಂದರೆ ಕನ್ನಡ ನಾಡಿನ ಭವಿಷ್ಯ ಉತ್ತಮವಾಗಬೇಕು. ಇಲ್ಲಿ ಜ್ಞಾನ, ವಿಜ್ಞಾನ, ತಂತಜ್ಞಾನ, ಈಗ ಎಐ ಜ್ಞಾನ ಬಂದಿದೆ. ಸಿಲಿಕಾನ್ ವ್ಯಾಲಿ ಅಂತ ಬೆಂಗಳೂರನ್ನು ಕರೆಯುತ್ತಾರೆ. 500 ಫಾರ್ಚೂನ್ ಕಂಪನಿಗಳಲ್ಲಿ 400 ಬೆಂಗಳೂರಿನಲ್ಲಿವೆ. 500 ಇಂಟರ್ ನ್ಯಾಷನಲ್ ಆರ್ ಆಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಪ್ರತಿ ದಿನ ಎಂಟರಿಂದ ಹತ್ತು ಸಾವಿರ ವಿದೇಶಿಗರು ಬೆಂಗಳೂರಿಗೆ ಬರುತ್ತಾರೆ. ಪ್ರತಿ ದಿನ ಇನ್ನೂರರಿಂದ ಮುನ್ನೂರು ವಿಜ್ಞಾನಿಗಳು ಬರುತ್ತಾರೆ. ಬೇರೆ ರಾಜ್ಯಗಳಿಂದ ಬಂದು ಇಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಿರುವುದಕ್ಕೆ ಅಭಿನಂದನೆ, ಕನ್ನಡದ ಮೇಲಿನ ತಮ್ಮ ಪ್ರೀತಿ ನಮ್ಮನ್ನು ಇಲ್ಲಿಗೆ ಕರೆ ತಂದಿದೆ. ಎಲ್ಲ ಪರಿವಾರಗಳು ಒಂದಾಗಿ ನೀವೆಲ್ಲರೂ ಕನ್ನಡಿಗರಾಗಿ ಅದ್ಭುತ ಕಾರ್ಯಕ್ರಮ ಮಾಡಿದ್ದೀರಿ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.














