ಇತ್ತೀಚಿನ ಸುದ್ದಿ
ಕಲ್ಲಡ್ಕ: ಜ್ಞಾನ ಶರಧಿ ಮತ್ತು ಜ್ಞಾನ ವಾರಿಧಿ ಪುಸ್ತಕದ ನೈತಿಕ ಮೌಲ್ಯಾಧಾರಿತ ತಾಲೂಕು ಮಟ್ಟದ ಸ್ಪರ್ಧೆ
05/12/2023, 22:20
ಬಂಟ್ವಾಳ(reporterkarnataka.com): ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಕಳೆದ 31 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಪುಸ್ತಕಾಧಾರಿತ ಸ್ಪರ್ಧೆಯು ಕೇವಲ ಸ್ಪರ್ಧೆಗಾಗಿ ಅಲ್ಲ ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಮಾನವೀಯ , ಸಾಂಸ್ಕೃತಿಕ , ನೈತಿಕ ಮೌಲ್ಯವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ರಾಜ್ಯಾದ್ಯಂತ ಲಕ್ಷಾಂತರ ಮಂದಿ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಹೇಳಿದರು.
ಅವರು ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಲಾದ ಜ್ಞಾನ ಶರಧಿ ಮತ್ತು ಜ್ಞಾನ ವಾರಿಧಿ ಪುಸ್ತಕದ ನೈತಿಕ ಮೌಲ್ಯಾಧಾರಿತ ತಾಲೂಕು ಮಟ್ಟದ ಸ್ಪರ್ಧೆಯನ್ನು ಕಲ್ಲಡ್ಕದ
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸಿಂಥಿಯಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಧುಸೂದನ ಐತಾಳ್, ವಲಯ ಸಂಪನ್ಮೂಲ ವ್ಯಕ್ತಿ ಜ್ಯೋತಿ ಡಿ.ಭಾಗವಹಿಸಿ ಶುಭ ಹಾರೈಸಿದರು.
ಬಂಟ್ವಾಳ ತಾಲೂಕು ಯೋಗ ಮತ್ತು ನೈತಿಕ ಶಿಕ್ಷಣ ಸ್ಪರ್ಧೆ ಸಂಯೋಜಕ ಶಿಕ್ಷಕ ಚೆನ್ನಕೇಶವ ಪೆರ್ನೆ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ಶಿಕ್ಷಕಿ ಲತಾ ಪೆರ್ನೆ ವಂದಿಸಿದರು. ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ , ಪ್ರಬಂಧ ಸ್ಪರ್ಧೆ, ಕಂಠಪಾಠ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಯಿತು.