3:46 AM Wednesday26 - November 2025
ಬ್ರೇಕಿಂಗ್ ನ್ಯೂಸ್
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ ಛಲವಾದಿ ಹಾಗೂ ಆರ್. ಅಶೋಕ್ ಗೆ ರಾಜಕೀಯ ವಿವೇಕ ಇಲ್ಲ: ಸಚಿವ ಎನ್.… ಸಂತಾನ ಹರಣ ಚಿಕಿತ್ಸೆ ಬಳಿಕವೂ ಗರ್ಭಿಣಿಯಾದ ಪತ್ನಿ: ಪತಿಯಿಂದ ವೈದ್ಯರಿಗೆ ಬೆದರಿಕೆ ಆರೋಪ:… ರಾಜ್ಯದ ಕ್ರಿಕೆಟ್ ಪಟುಗಳಿಗೆ ತಲಾ 10 ಲಕ್ಷ ನಗದು ಬಹುಮಾನ ಜತೆಗೆ ಸರ್ಕಾರಿ… ಹೈವಿಷನ್ ಇಂಡಿಯಾ ಜತೆ ಕೊರಿಯನ್ ಸಂಸ್ಥೆ ಜಿಟಿಟಿಸಿ ಒಪ್ಪಂದಕ್ಕೆ ಸಹಿ |ರಾಜ್ಯದ ಪ್ರವಾಸಿ… ಗಗನಯಾನಿಯಾಗಲು ದೈಹಿಕ, ಮಾನಸಿಕ ಆರೋಗ್ಯ ಬಹಳ ಮುಖ್ಯ: ಶುಭಾಂಶು ಶುಕ್ಲಾ Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ

ಕಾಡಿನ ನಡುವೆ ತೇಜಸ್ವಿ ಕೃತಿಗಳ ಓದು: ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಕಾರ್ಯಕ್ರಮ

28/01/2024, 23:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸದಾ ಪ್ರವಾಸಿಗರಿಂದ ಗಿಜಿಗುಡುವ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಪರಿಸರ ಸಂರಕ್ಷಣೆಯ ಕುರಿತ ತೇಜಸ್ವಿ ಅವರ ಕೃತಿಗಳ ಓದಿನ ಸದ್ದು ಎಲ್ಲೆಡೆ ಮನೆ ಮಾಡಿತ್ತು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ರಾಣಿಝರಿ ಬಲ್ಲಾಳರಾಯನ ದುರ್ಗದಲ್ಲಿ ಆಯೋಜಿಸಿದ್ದ ಕಾಡಿನಲ್ಲಿ ಓದು ನಡಿಗೆ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಚಾರಣಿಗರು ಸುತ್ತ ಕಣ್ಣು ಹಾಯಿಸಿದಷ್ಟು ದೂರವೂ ಹಬ್ಬಿರುವ ಹಸಿರು ಅರಣ್ಯದ ನಡುವೆ ಒಂದೆಡೆ ಸೇರಿ ತೇಜಸ್ವಿ ಕೃತಿಗಳ ಕೆಲ ಸಾಲುಗಳನ್ನು ಓದಿದರು.


ಕೀಟತಜ್ಞರಾದ ಮೂಡಿಗೆರೆಯ ಅವಿನಾಶ್ ಮಾತನಾಡಿ, ಪರಿಸರದ ಬಗ್ಗೆ ಬೆರಗು ಮತ್ತು ಪರಿಸರದ ಉಳಿವಿನ ಮಹತ್ವವನ್ನು ತೇಜಸ್ವಿ ಅವರು ತಮ್ಮ ಬಹುತೇಕ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ತೇಜಸ್ವಿ ಕೃತಿಗಳಿಂದಾಗಿ ಹೊಸದೊಂದು ಓದುಗ ವರ್ಗ ಸೃಷ್ಠಿಯಾಗಿ ಓದಿನ ರುಚಿ ಎಲ್ಲರಲ್ಲೂ ಮೂಡುತ್ತಿದೆ. ಪರಿಸರ, ಜೀವಸಂಕುಲ, ಬಾಹ್ಯಾಕಾಶ, ಮುಂತಾದ ವಿಷಯಗಳ ಬಗ್ಗೆ ತೇಜಸ್ವಿ ಅವರು ತಮ್ಮ ಕೃತಿಗಳಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಎಂದರು.
ಮಂಡ್ಯದ ಅಂಶು ಅವರು ಪರಿಸರದ ಕಥೆ, ಚಿಕ್ಕಮಗಳೂರಿನ ಕಾರ್ತಿಕ್ ಎಂ.ಕೆ. ಹುಲಿಯೂರಿನ ಸರಹದ್ದು, ದೀಪಗೌಡ ಅವರು ಪಾಕಕ್ರಾಂತಿ, ತುಮಕೂರಿನ ಪಲ್ಲವಿ ರಂಗನಾಥ್ ಮಾಯಾಲೋಕ, ಚಿತ್ರದುರ್ಗದ ದಿನೇಶ್ ಕೆ.ಎಸ್ ಅವರು ಮಿಸ್ಸಿಂಗ್ ಲಿಂಕ್, ಬೆಂಗಳೂರಿನ ಪ್ರೇಮಾ ಅವರು ಹೆಜ್ಜೆ ಮೂಡದ ಹಾದಿ, ಬೆಂಗಳೂರಿನ ಸುನಿತಾ ಮತ್ತು ವಿನೋದ್ ಅವರು ವಿಸ್ಮಯ ವಿಶ್ವ, ಶಿರಾದ ಶ್ರೀನಾಥ್ ಅವರು ಪಾಕಕ್ರಾಂತಿ, ಮೂಡಿಗೆರೆಯ ಅವಿನಾಶ್ ಅವರು ಪಾಕಕ್ರಾಂತಿ, ನಂದೀಶ್ ಬಂಕೇನಹಳ್ಳಿ ಅವರು ಕರ್ವಾಲೊ, ಕೃತಿಯನ್ನು ಓದಿದರು. ಚಿಕ್ಕಮಗಳೂರಿನ ಸತ್ಯನಾರಾಯಣ, ಓಂಕಾರಪ್ಪ, ಹಾಸನದ ಬಾಲು ತೇಜಸ್ವಿ ಅವರ ಬದುಕು ಬರಹದ ಕುರಿತು ಚರ್ಚೆ ನಡೆಸಿದರು.
ಪರಿಸರದ ಸಂರಕ್ಷಣೆ, ತೇಜಸ್ವಿ ಅವರ ಬದುಕು, ಬರಹಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಕಾಡಿನಲ್ಲಿ ಓದು ಕಾರ್ಯಕ್ರಮಕ್ಕೂ ಮುನ್ನ ರಾಣಿಝರಿಯಿಂದ ಬಲ್ಲಾಳರಾಯನ ದುರ್ಗಕ್ಕೆ ಚಾರಣ ನಡೆಸಲಾಯಿತು. ಕೀಟತಜ್ಞರಾದ ಅವಿನಾಶ್ ಅವರು ಕೀಟಗಳ ಬಗ್ಗೆ ಮಾಹಿತಿ ನೀಡಿದರು. ಪ್ಲಾಸ್ಟಿಕ್ ನ್ನು ಎಲ್ಲಿಯೂ ಬಳಕೆ ಮಾಡದೇ ಪ್ಲಾಸ್ಟಿಕ್‌ಮುಕ್ತ ಚಾರಣ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕೀಟ ತಜ್ಞರಾದ ಅವಿನಾಶ್, ತೇಜಸ್ವಿ ಅವರ ಒಡನಾಡಿ ಹಾಗೂ ಕಲಾವಿದರಾದ ಬಾಪುದಿನೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಭಿಲಾಷ್, ಚಂದನ್ ಸಿಬ್ಬಂದಿ ಭವಿತ್ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 40ಕ್ಕೂ ಹೆಚ್ಚು ಚಾರಣಿಗರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು