ಇತ್ತೀಚಿನ ಸುದ್ದಿ
ಕದಂಬೋತ್ಸವ: ಫೆ. 28ರಂದು ಮುಖ್ಯಮಂತ್ರಿ ಬೊಮ್ಮಾಯಿ ಬನವಾಸಿಗೆ; ಮೂಲಸೌಕರ್ಯಕ್ಕೆ ಸಿದ್ಧತೆ
23/02/2023, 21:41
ಶಿರಸಿ(reporterkarnataka.com): ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ಸಿದ್ಧತೆಗಳು ನಡೆಸಲಾಗುತ್ತಿದ್ದು, ಫೆ.28ರಂದು ಬನವಾಸಿಗೆ ಮುಖ್ಯಮಂತ್ರಿ ಆಗಮಿಸಲಿದ್ದಾರೆ. ಕದಂಬೋತ್ಸವದಲ್ಲಿ 40 ಮಳಿಗೆ ಹಾಕಲು ಅವಕಾಶ ನೀಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
ಶಿರಸಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಶೌಚಾಲಯ, ಕುಡಿವ ನೀರು, ವಿದ್ಯುತ್ ದೀಪಾಲಂಕಾರ ಸೇರಿ ಹಲವು ಮೂಲಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಬನವಾಸಿ ಮತ್ತು ಗುಡ್ನಾಪುರ ಗ್ರಾ. ಪಂಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಫೆ. 28 ರಂದು ಮುಖ್ಯಮಂತ್ರಿ ಬನವಾಸಿಗೆ ಬರುತ್ತಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಉಪ ವಿಭಾಗಾಧಿಕಾರಿ ದೇವರಾಜ್ ಆರ್ ಮಾತನಾಡಿ, ಕದಂಬ ಜ್ಯೋತಿ ರಥ ಸಿದ್ಧವಾಗುತ್ತಿದೆ. ರಥದ ಜತೆ ನೋಡಲ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಇರುವಂತೆ ಸೂಚಿಸಲಾಗಿದೆ. ಲೋಪ ದೋಷಗಳು ಆಗದಂತೆ ಕದಂಬೋತ್ಸವ ಸಿದ್ಧತೆ ನಡೆಸಬೇಕು ಎಂದರು.
ಕದಂಬೊತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಕಿರಣ್ ನಾಯ್ಕ ಮಾತನಾಡಿ, ಫೆ. 26 ರಂದು ಕ್ರೀಡಾ ಚಟುವಟಿಕೆಗಳು ಆರಂಭವಾಗಲಿವೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಮಧ್ಯಾಹ್ನ 3 ಗಂಟೆಗೆ ಜಯಂತಿ ಪ್ರೌಢಶಾಲೆ ಮೈದಾನದಲ್ಲಿ ಕ್ರೀಡಾಕೂಟ ಆರಂಭವಾಗಲಿದೆ. ಫೆ. 27 ರಂದು ಕಬಡ್ಡಿ ಹಾಗೂ ಮೂಜಿನ ಆಟಗಳು ನಡೆಯಲಿದೆ. ಹಗ್ಗ ಜಗ್ಗಾಟ ಸ್ಪರ್ಧೆಗೆ (ಮಹಿಳಾ ಹಾಗೂ ಪುರುಷ) ಬಹುಮಾನ ಕೂಡ ಇದೆ ಎಂದರು.
ಸಭೆಯಲ್ಲಿ ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.














