ಇತ್ತೀಚಿನ ಸುದ್ದಿ
ಕಡಲನಗರಿಯಲ್ಲಿ ಕೃಷ್ಣಲೋಕ ಸೃಷ್ಟಿ: ಕದ್ರಿಯಲ್ಲಿ ಮೇಳೈಸಿದ ಕೇಶವ, ಅಚ್ಯುತ, ಮಾಧವ!
06/09/2023, 23:16

ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಅಲ್ಲಿ ಕೃಷ್ಣಲೋಕವೇ ಸೃಷ್ಟಿಯಾಗಿತ್ತು. ಎಲ್ಲಿ ನೋಡಿದರಲ್ಲಿ ಕೃಷ್ಣ ಪರಮಾತ್ಮನ ದರುಶನ. ಹಾಗೆಂತ ಕೇಶವ, ಅಚ್ಯುತ, ಮಾಧವರ ವಿಗ್ರಹ- ಮೂರ್ತಿಗಳ ದರ್ಶನವಲ್ಲ. ಓಡಾಡುವ ಪರಮಾತ್ಮರೇ ಅಲ್ಲಿ ಕಾಣಸಿಗುತ್ತಿದ್ದರು.
ಕೆಲವು ಕೃಷ್ಣರು ಅಮ್ಮನ ಕಂಕುಳಲ್ಲಿ ಕಂಡು ಬಂದರೆ, ಇನ್ನು ಕೆಲವರು ಅಪ್ಪನ ತೋಳಲ್ಲಿ, ಅಜ್ಜನ ಹೆಗಲಲ್ಲಿ ಜೋತು ಬಿದ್ದಿದ್ದರು. ಐಸ್ ಕ್ರೀಮ್ ತಿನ್ನುವ ಕೃಷ್ಣರು, ಕ್ಯಾಡ್ ಬರಿ ಮೆಲ್ಲುವ ಕೃಷ್ಣರು, ಕುರ್ಕುರೆ ಸವಿಯುವ ಕೃಷ್ಣರೂ ಅಲ್ಲಿದ್ದರು.
ಇದೆಲ್ಲ ಕಂಡು ಬಂದದ್ದು ನಗರದ ಕದ್ರಿ ಮಂಜುನಾಥ ದೇವಳದ ಆವರಣದಲ್ಲಿ. ಕಲ್ಕೂರ ಪ್ರತಿಷ್ಠಾನ ಪ್ರತಿವರ್ಷ ನಡೆಸುವಂತೆ ಈ ಬಾರಿಯೂ ರಾಷ್ಟ್ರೀಯ ಕೃಷ್ಣವೇಷ ಸ್ಪರ್ಧೆ ಏರ್ಪಡಿಸಿತ್ತು. ಬಾಲಕೃಷ್ಣ, ತುಂಟ ಕೃಷ್ಣ, ಕಿಶೋರ ಕೃಷ್ಣ, ಯಕ್ಷಕೃಷ್ಣ,ಯಶೋಧಕೃಷ್ಣ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಟ್ಟಿತ್ತು. ಪುಟಾಣಿಗಳಿಗಿಂತಲೂ ಅವರ ಹೆತ್ತವರು ಬಹಳ ಖುಷಿಯಿಂದ ತಮ್ಮ ಮಗ-ಮಗಳನ್ನು ಜತೆಗೆ ಕರೆದುಕೊಂಡು ಬಂದಿದ್ದರು. ಕೆಲವರು ಹೊರಗಿನಿಂದಲೇ ತಮ್ಮ ಮಕ್ಕಳಿಗೆ ಕೃಷ್ಣವೇಷ ಹಾಕಿಸಿಕೊಂಡು ಬಂದರೆ ಇನ್ನೂ ಕೆಲವರು ದೇವಳದಲ್ಲೇ ಪ್ರಸಾದನ ಮಾಡಿಸುವುದು ಕಂಡು ಬಂತು. ಹೆಚ್ಚಿನ ಮಕ್ಕಳು ಉತ್ಸುಕತೆಯಿಂದ ತಮ್ಮನ್ನು ಕೃಷ್ಣನಾಗಿ ಪರಿವರ್ತಿಸಿಕೊಂಡರೆ, ಕೆಲವು ಮಕ್ಕಳು ವೇಷ ಬೇಡವೆಂದು ಅಳುವುದು ಕೂಡ ಕಂಡು ಬಂತು. ಅಂತಹ ಮಕ್ಕಳಿಗೆ ಪೋಷಕರು ಐಸ್ ಕ್ರೀಮ್, ಕ್ಯಾಡ್ ಬರಿ ಮುಂತಾದ ಆಮಿಷೆಗಳನ್ನೊಡಿ ಮಕ್ಕಳ ಮುಖಕ್ಕೆ ಬಣ್ಣ ಹಚ್ಚುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದರು. ತಂದೆ- ತಾಯಿಯಂದಿರಿಗೆ ಗುರುತು ಸಿಗದಷ್ಟು ಕೃಷ್ಣವೇಷ ಹಾಕಿದ ಮಕ್ಕಳು ಬದಲಾಗಿದ್ದರು. ಒಟ್ಟಿನಲ್ಲಿ ಕದ್ರಿ ಕೃಷ್ಣಲೋಕವಾಗಿ ಪರಿವರ್ತನೆಗೊಂಡಿತ್ತು.