7:01 PM Tuesday10 - February 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:… ಕಾಂಗ್ರೆಸ್‌ನ ಲೂಟಿ ನೋಡಿ ಗಾಂಧೀಜಿಯ ಕೈಗೆ ಕೋಲು ಬಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ತಂಡದಿಂದ ವಿವಿಧೆಡೆ ದಿಢೀರ್ ಭೇಟಿ: ಪರಿಶೀಲನೆ

ಇತ್ತೀಚಿನ ಸುದ್ದಿ

ಕಡಲ ತಡಿಯಿಂದ ಸ್ಪೀಕರ್ ಸ್ಥಾನದವರೆಗೆ ಖಾದರ್ ಪಯಣ: ಉಳ್ಳಾಲದ ಕುವರನಿಗೆ ರಾಜ್ಯದ 2ನೇ ಅತ್ಯುನ್ನತ ಹುದ್ದೆ

23/05/2023, 19:32

ಮಂಗಳೂರು(reporterkarnataka.com):ಹುಡ್ಗರ ಜತೆ ಕ್ರಿಕೆಟ್ ಆಡುವ, ಜಾತ್ರೆಯಲ್ಲಿ ಬೀದಿ ಬದಿಯ ಕಮಲ್ಲಮ್ಮನಿಂದ ಕಡ್ಗೆ ಖರೀದಿಸಿ ತಿನ್ನುವ, ಜಾತ್ರೆ, ಕೋಲ, ನೇಮಕ್ಕೆ ಹಾಜರಾಗುವ, ಮಸೀದಿ- ಚರ್ಚ್ ನಲ್ಲಿ ಪ್ರಾರ್ಥನೆ ಸಲ್ಲಿಸುವ ಯು.ಟಿ. ಖಾದರ್ ಅಂದ್ರೆ ಮಂಗಳೂರು ಕ್ಷೇತ್ರದ ಜನತೆಗೆ ಮಾತ್ರವಲ್ಲ, ನಾಡಿನುದ್ದಗಲದ ಜನರಿಗೂ ಅಚ್ಚುಮೆಚ್ಚು. ಇದೇ ಕಾರಣಕ್ಕೆ 2008ರಲ್ಲಿ ಚುನಾವಣಾ ರಾಜಕೀಯಕ್ಕೆ ಧುಮುಕಿದ ಖಾದರ್ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇನ್ನು ಅವರು ರಾಜ್ಯ ವಿಧಾನಸಭೆಯ ಸ್ಫೀಕರ್.
ಯು ಟಿ. ಅಬ್ದುಲ್ ಖಾದರ್ ಫರೀದ್ ಅವರು ತನ್ನ ತಂದೆಯಾದ ಶಾಸಕ ಯು ಟಿ ಫರೀದ್ ನಿಧನರಾಗಿ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸುತ್ತಾರೆ. ನಂತರ 2008,2013, 2018 ಹಾಗೂ 2023 ರಲ್ಲಿ ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008 ರಿಂದ 2013 ರ ಅವಧಿಯ ವಿಧಾನಸಭೆಯ ಅತ್ಯುತ್ತಮ ಕಾರ್ಯ ವೈಖರಿಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಗಳಿಸಿದ್ದರು.


2013ರ ಸಿದ್ದರಾಮಯ್ಯ ಸರಕಾರದಲ್ಲಿ ಆರೋಗ್ಯ ಸಚಿವರಾಗಿ 2016ರ ತನಕ ಕಾರ್ಯ ನಿರ್ವಹಿಸಿದರು. ಈ ಅವಧಿಯಲ್ಲಿ ರಾಜ್ಯದಲ್ಲಿ ಗುಟ್ಕಾ ನಿಷೇಧ, ಬೈಕ್ ಅಂಬ್ಯುಲೆನ್ಸ್,108, ಆರೋಗ್ಯಶ್ರೀ, ದಂತ ಭಾಗ್ಯ, ಸರಕಾರೀ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕ, ಹರೀಶ್ ಸಾಂತ್ವನ ಯೋಜನೆ ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಕೇಂದ್ರ ಸರಕಾರ ನೀಡುವ ಉತ್ತಮ ಆರೋಗ್ಯ ಸಚಿವ ಪ್ರಶಸ್ತಿ ಕೂಡ ತನ್ನದಾಗಿಸಿ ಕೊಂಡಿದ್ದರು.
ನಂತರ 2016 ರಿಂದ 2018 ರ ತನಕ ಆಹಾರ ಸಚಿವರಾಗಿ ಅಧಿಕಾರ ಸ್ವೀಕರಿಸಿ, ಬಡವರು ಪಡಿತರ ಚೀಟಿಗಾಗಿ ಸಲ್ಲಿಸಬೇಕಾಗಿದ್ದ 10ರಿಂದ 13 ದಾಖಲೆಗಳನ್ನು ಕಡಿತಗೊಳಿಸಿ ಕೇವಲ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಿ ಮನೆ ಬಾಗಿಲಿಗೆ ರೇಷನ್ ಕಾರ್ಡ್ ತಲುಪಿಸುವ ಕ್ರಾಂತಿಕಾರಿ ಯೋಜನೆಗೆ ಚಾಲನೆ ನೀಡಿ ಇತಿಹಾಸ ಸೃಷ್ಟಿಸಿದರು. ಬಿಪಿಎಲ್ ಕಾರ್ಡು ಪಡೆಯಲು ನಿಗದಿಪಡಿಸಿದ್ದ ಆದಾಯ ಮಿತಿಯನ್ನು ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ನಿಂದ ವಂಚಿತರಾಗಿದ್ದ ಲಕ್ಷಾಂತರ ಮಂದಿ ರೇಷನ್ ಕಾರ್ಡ್ ಪಡೆಯಲು ನೆರವಾದರು.
2018ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾಗಿ ಅಧಿಕಾರ ಸ್ವೀಕರಿಸಿ ಮಂಗಳೂರು ಸ್ಮಾರ್ಟ್ ಸಿಟಿ ಸಹಿತ ಅನೇಕ ಯೋಜನೆಗಳನ್ನು ಪರಿಚಯಿಸಿ ಯಶಸ್ವಿಯಾದರು
ಕರ್ನಾಟಕ ವಸತಿ ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ನಗರನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ, ರಾಜೀವ್ ಗಾಂಧಿ ಹೌಸಿಂಗ್ ಬೋರ್ಡ್ ನ ಅಧ್ಯಕ್ಷರಾಗಿ, ಕರ್ನಾಟಕ ಕೊಳಗೇರಿ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
2021ರಲ್ಲಿ ಕರ್ನಾಟಕ ವಿಧಾನಸಭೆಯ ಪ್ರತಿ ಪಕ್ಷದ ಉಪ ನಾಯಕರಾಗಿ ಆಯ್ಕೆಯಾಗಿ 2023 ರ ವರೆಗೆ ಕಾರ್ಯ ನಿರ್ವಹಿಸಿ ಪ್ರತೀ ಹಂತದಲ್ಲೂ ಸರಕಾರದ ನ್ಯೂನತೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸೈ ಎನಿಸಿ ಕೊಂಡರು.
ಶೈಕ್ಷಣಿಕ ವಿವರ: ಯು ಟಿ ಖಾದರ್ ರವರು ತನ್ನ ಎಲ್ ಕೆಜಿ ಶಿಕ್ಷಣವನ್ನು ರೋಶನಿ ನಿಲಯದಲ್ಲಿ, ಒಂದರಿಂದ ನಾಲ್ಕನೇ ತರಗತಿ ವರೆಗೆ ಸೈಂಟ್ ಜೆರೋಝ, 4ನೇ ತರಗತಿಯಿಂದ ಪ್ರೌಢ ಶಿಕ್ಷಣದ ವರೆಗೆ ಸೈಂಟ್ ಅಲೋಶಿಯಸ್ ನಲ್ಲಿ , ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದಿರೆಯ ಮಹಾವೀರ ಕಾಲೇಜಿನಲ್ಲಿ ಕಲಿತು ನಂತರ ಎಸ್ ಡಿಎಂ ಕಾಲೇಜಿನಲ್ಲಿ ಬಿಎ, ಎಲ್ ಎಲ್ ಬಿ ಪದವಿ ಶಿಕ್ಷಣ ಮುಗಿಸಿದರು.
ಹವ್ಯಾಸ: ಖಾದರ್ ಅವರು ಯಂಗ್ ಏಜ್ ನಲ್ಲೇ
ಬೈಕ್ ಹಾಗೂ ಕಾರ್ ರೇಸ್ ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೋಟೋ ರೇಸ್ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿದ್ದರು. ಕ್ರೀಡೆಯಲ್ಲಿ ಕೂಡ ಆಸಕ್ತಿ ಹೊಂದಿದ್ದು ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್, ಹಾಕಿ, ಟೆನ್ನಿಸ್ ಹಾಗೂ ಇತರ ಕ್ರೀಡೆಗಳನ್ನು ಆಡುತ್ತಿದ್ದರು.
ರಾಜಕೀಯ:
1990ರಲ್ಲಿ ಎನ್ ಎಸ್ ಯುಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ,1994 ರಿಂದ 1999ರ ವರೆಗೆ ಎನ್ ಎಸ್ ಯುಐ ಜಿಲ್ಲಾಧ್ಯಕ್ಷರಾಗಿ,1999 ರಿಂದ 2001 ರ ವರೆಗೆ ಎನ್ ಎಸ್ ಯುಐ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2003 ರಲ್ಲಿ ಘಟಪ್ರಭ ದಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ, 2004 ರಲ್ಲಿ ಹಿಮಾಚಲ ಪ್ರದೇಶದ ಕಂದಘಾಟ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸೇವಾದಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ 2005ರಲ್ಲಿ ಸೇವಾದಳದ ಹೆಚ್ಚುವರಿ ಮುಖ್ಯ ಸಲಹೆಗಾರರಾಗಿ ಆಯ್ಕೆಯಾಗಿದ್ದರು. ನಂತರ ಕೆಪಿಸಿಸಿ ಸದಸ್ಯರಾಗಿ 2008 ರಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.

ಇತ್ತೀಚಿನ ಸುದ್ದಿ

ಜಾಹೀರಾತು