ಇತ್ತೀಚಿನ ಸುದ್ದಿ
ಖಾಸಗಿ ಬಸ್ ಪ್ರಯಾಣ ದರ ಏರಿಕೆ ತಡೆ ಹಿಡಿದು ಪ್ರಾಧಿಕಾರದ ಸಭೆ ಕರೆಯಿರಿ: ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಗ್ರಹ
11/08/2021, 14:36
ಮಂಗಳೂರು(reporterkarnataka.com): ಖಾಸಗೀ ಬಸ್ ಪ್ರಯಾಣ ದರದ ವಿಪರೀತ ಏರಿಕೆಯನ್ನು ಖಂಡಿಸಿ, ದ.ಕ.ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ, ದ.ಕ.ಜಿಲ್ಲೆಯ ಜಾತ್ಯತೀತ ಪಕ್ಷಗಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಅರ್ಪಿಸಲಾಯಿತು.
ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯದೆ ಏಕಾಏಕಿಯಾಗಿ ಬಸ್ ಪ್ರಯಾಣ ದರವನ್ನು ಏರಿಸಿದ್ದು, ಸರ್ವಥಾ ಸರಿಯಲ್ಲ. ಕೊರೊನಾ ಸಂಕಷ್ಟದ ಕಾಲಘಟ್ಟದಲ್ಲಿ ಜಿಲ್ಲೆಯ ಲಕ್ಷಾಂತರ ಜನತೆ ಉದ್ಯೋಗವಿಲ್ಲದೆ ಆರ್ಥಿಕ ಸಮಸ್ಯೆಯಿಂದ ತೀವ್ರವಾಗಿ ಕಂಗೆಟ್ಟಿರುವಾಗ ಜಿಲ್ಲಾಧಿಕಾರಿ ಗಳು ಕೇವಲ ನೂರಾರು ಸಂಖ್ಯೆಯಲ್ಲಿರುವ ಬಸ್ ಮಾಲೀಕರ ನೋವಿಗೆ ಸ್ಪಂದಿಸುವ ನೆಪದಲ್ಲಿ ಸಾರಿಗೆ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಸರ್ವ ರಾಜಕೀಯ ಪಕ್ಷಗಳು,ಕೂಡಲೇ ಏರಿಸಿದ ದರವನ್ನು ತಡೆ ಹಿಡಿದು, ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆದು ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿವೆ.
ನಿಯೋಗದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ, ನೀರಜ್ ಪಾಲ್, ಸಿಪಿಎಂ ನಾಯಕರಾದ ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಸಿಪಿಐ ಮುಖಂಡರಾದ ಕರುಣಾಕರ್, ಜಗತ್ಪಾಲ್, ಜಾತ್ಯತೀತ ಜನತಾದಳದ ಮುಖಂಡರಾದ ಸುಮತಿ ಎಸ್ ಹೆಗ್ಡೆ, ಅಲ್ತಾಫ್ ತುಂಬೆ, ಡಿವೈಎಫ್ ಐI ನಾಯಕರಾದ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ದಲಿತ ಸಂಘಟನೆಗಳ ನಾಯಕರಾದ ಎಂ.ದೇವದಾಸ್, ರಘು ಎಕ್ಕಾರು, ತಿಮ್ಮಯ್ಯ ಕೊಂಚಾಡಿ ಉಪಸ್ಥಿತರಿದ್ದರು.