ಇತ್ತೀಚಿನ ಸುದ್ದಿ
ಕಾಡಾನೆ ಹಾವಳಿ ತಡೆಗಟ್ಟಲು ಸೋಲಾರ್ ಬೇಲಿ ನಿರ್ಮಾಣಕ್ಕೆ 5 ಕೋಟಿ ಹಣ ಬಿಡುಗಡೆ : ಪಿಸಿಸಿಎಫ್
26/11/2023, 22:20
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಅರಣ್ಯ ಉಪವಿಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸೋಲಾರ್ ಬೇಲಿ ನಿರ್ಮಿಸಲು ರೂ. 5 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ತಿಳಿಸಿದ್ದಾರೆ.
ಅವರು ಬೈದುವಳ್ಳಿ ಗ್ರಾಮದಲ್ಲಿ ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಳೆದ ಮೂರು ತಿಂಗಳಿನಿಂದ ಚಿಕ್ಕಮಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ಮೂರು ಜನ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಆಲ್ದೂರು ವಲಯದಲ್ಲಿ ಇಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಮೂಡಿಗೆರೆ ವಲಯದ ವ್ಯಾಪ್ತಿಯಲ್ಲಿ ಆನೆ ಕಾರ್ಯಪಡೆಯ ಸಿಬ್ಬಂದಿ ಕಾರ್ತಿಕ್ ಗೌಡ ಆನೆಗಳನ್ನು ಕಾಡುಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಅಲ್ಲದೇ ರೈತರ ಜಮೀನಿಗೆ ಕಾಡಾನೆಗಳು ಹಾನಿ ಮಾಡುತ್ತಿರುವ ಬಗ್ಗೆ ನಿರಂತರ ದೂರುಗಳು ಕೇಳಿ ಬರುತ್ತಿವೆ. ಈ ಹಿನ್ನಲೆಯಲ್ಲಿ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ನಿಯಂತ್ರಣ ಮಾಡಲು ಸೋಲಾರ್ ಬೇಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಆರಂಭಿಕ ಹಂತದಲ್ಲಿ 5 ಕೋಟಿ ಹಣವನ್ನು ಮೀಸಲಿಡಲಾಗಿದೆ. ಟೆಂಡರ್ ಪ್ರಕ್ರಿಯೆಯ ನಂತರ ಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುತ್ತದೆ. ಈ ಬೇಲಿ ಜಿಲ್ಲೆಯ ಸಾರಗೋಡು, ಕುಂದೂರು, ಬಾಸ್ತಿ, ಊರುಬಗೆ, ಗುತ್ತಿ, ಬೈರಾಪುರ ಭಾಗದಲ್ಲಿ ನಿರ್ಮಾಣ ಮಾಡಲು ನೀಲಿನಕ್ಷೆ ತಯಾರಿಸಲಾಗಿದೆ. ಹಾಗೆಯೇ ಮೂಡಿಗೆರೆ ಪಟ್ಟಣಕ್ಕೆ ಆನೆಗಳು ಬಾರದಂತೆ ತಡೆಯಲು ಆಯಾಕಟ್ಟಿನ ಜಾಗದಲ್ಲಿ ಸೋಲಾರ್ ಬೇಲಿ ನಿರ್ಮಿಸಲಾಗುವುದು ಎಂದಿದ್ದಾರೆ.
ಚಿಕ್ಕಮಗಳೂರು ಪ್ರಧಾನ ಅರಣ್ಯ ಅಧಿಕಾರಿ ಯು.ಪಿ. ಸಿಂಗ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 7 ಕಾಡಾನೆಗಳನ್ನು ಹಿಡಿಯಲು ಸರ್ಕಾರದಿಂದ ಆದೇಶವಾಗಿತ್ತು. ಅದರಲ್ಲಿ ಒಂದು ಆನೆಯನ್ನು ಸೆರೆಹಿಡಿಯಲಾಗಿದೆ. ಇನ್ನೂ 6 ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿಯಲು ಆದೇಶ ಚಾಲ್ತಿಯಲ್ಲಿದೆ. ಈಗಾಗಲೇ ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಆನೆ ಶಿಬಿರ ತೆರೆದಿದ್ದು, ಸೆರೆಹಿಡಿಯಬೇಕಾದ ಆನೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.
ರಾಜ್ಯ ಉಪ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಆನೆಪಡೆಯ ಶಾಶ್ವತಿ ಮಿಶ್ರಾ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ಆನೆ ಬಿಡಾರಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಆನೆ ಬಿಡಾರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ನಿಯಂತ್ರಣಕ್ಕೆ ತಕ್ಷಣಕ್ಕೆ ಸ್ಪಂದಿಸಲು ಸಹಾಯಕವಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಅನುಕೂಲವಾಗತ್ತದೆ ಎಂದರು.
ಚಿಕ್ಕಮಗಳೂರು ಡಿಸಿಎಫ್ ರಮೇಶ್ ಬಾಬು, ಭದ್ರಾ ವೈಲ್ಡ್ ಲೈಪ್ ನಿರ್ದೇಶಕ ಯಶ್ಪಾಲ್ ಕ್ಷೀರಸಾಗರ್, ಪಶುವೈದ್ಯರಾದ ಡಾ. ಮುಜೀಬ್, ಡಾ. ವಿಶಾಖ, ಮೂಡಿಗೆರೆ ಎಸಿಎಫ್ ರಘು, ಆರ್.ಎಫ್.ಓ. ಚರಣ್ ಕುಮಾರ್ ಉಪಸ್ಥಿತರಿದ್ದರು.