11:16 PM Sunday26 - January 2025
ಬ್ರೇಕಿಂಗ್ ನ್ಯೂಸ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ: ಮಾಜಿ ಸಿಎಂ… ಕಲ್ಲು ಗಣಿಗಾರಿಕೆ: ಡೈನಮೈಟ್ ಸ್ಫೋಟಕ್ಕೆ ಹಲವು ಮನೆಗಳಿಗೆ ಹಾನಿ; 6 ಸೆಕೆಂಡ್ ಕಂಪಿಸಿದ… ಚಾರ್ಮಾಡಿ ಘಾಟಿ ಕಾಡ್ಗಿಚ್ಚು: ಅಗ್ನಿಶಾಮಕ‌ ದಳ, ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದಿಂದ ಬೆಂಕಿ… ಮೈಕ್ರೋ ಫೈನಾನ್ಸ್‌ ನಿಯಂತ್ರಣಕ್ಕೆ ಸುಗ್ರೀವಾಜ್ಞೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸಕ್ಕೆ ಸುತ್ತೂರು ಶ್ರೀಗಳು ಚಾಲನೆ; ಮಹಾ ದಾಸೋಹಕ್ಕೆ ಕ್ಷಣಗಣನೆ ಕುವೆಂಪು ಆಶಯಕ್ಕೆ ಕೊಳ್ಳಿ: ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ; ಸಿನಿಮಾ ತಾರೆಯರಿಗಾಗಿ ರಂಗು… ಮನೆ ಸೀಝ್ ಮಾಡಿ ಬಾಣಂತಿ- ಮಗುವನ್ನು ಹೊರಹಾಕಿದ ಖಾಸಗಿ ಫೈನಾನ್ಸ್: ಬೀಗ ತೆರವುಗೊಳಿಸಿದ… ಗೃಹಲಕ್ಷ್ಮೀ ಮೂಲಕ ಮಹಿಳೆಯರ ಸಬಲೀಕರಣ, ಮೈಕ್ರೋ ಫೈನಾನ್ಸ್ ಮೂಲಕ ಜೀವಹರಣ: ಕೇಂದ್ರ ಸಚಿವ… 7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ…

ಇತ್ತೀಚಿನ ಸುದ್ದಿ

ಧನಾತ್ಮಕ‌ ವರದಿಯ ಸರದಾರ, ಹಿರಿಯ ಪತ್ರಕರ್ತ ಗುರುವಪ್ಪ ಬಾಳೇಪುಣಿ ಇನ್ನು ನೆನಪು ಮಾತ್ರ

26/01/2025, 22:54

ಮಂಗಳೂರು(reporterkarnataka.com): ಹಿರಿಯ ಪತ್ರಕರ್ತ, ಹೊಸ ದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ ಬಾಳೇಪುಣಿ ಅಲ್ಪಕಾಲದ ಅಸೌಖ್ಯದಿಂದ ಬಾಳೆಪುಣಿಯ ಸ್ವಗೃಹದಲ್ಲಿ ಭಾನುವಾರ ನಿಧನರಾಗಿದ್ದಾರೆ.
ಅವರಿಗೆ ೬೨ ವರ್ಷ ವಯಸ್ಸಾಗಿತ್ತು. ಬಾಳೇಪುಣಿ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ
ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೇಪುಣಿ ಅವರು ೩೯ ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ೨೭ ವರ್ಷಗಳಿಂದ ಹೊಸದಿಗಂತ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಅವರು ೨೦೨೧ರಿಂದ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
*೧೯೮೬ರಲ್ಲಿ ಪತ್ರಿಕೋದ್ಯಮ ಪ್ರವೇಶ
೧೯೬೩ರ ಜೂ.೧ರಂದು ಜನಿಸಿದ ಬಾಳೇಪುಣಿ ಅವರು ೧೯೮೬ರ ಸೆಪ್ಟೆಂಬರ್‌ನಲ್ಲಿ ಪತ್ರಿಕೋದ್ಯಮ ಕ್ಷೇತ್ರ ಪ್ರವೇಶ ಮಾಡಿದ್ದರು. ಆರಂಭದಲ್ಲಿ ಅಮೃತ ವಾರಪತ್ರಿಕೆ, ಚೇತನಾ ವಾರಪತ್ರಿಕೆ, ದಿ ಗೋಲ್ಡ್ ಕನ್ನಡ ವಾರಪತ್ರಿಕೆ, ಸಪ್ತಸಾರ ವಾರಪತ್ರಿಕೆ ಮೊದಲಾದವುಗಳಲ್ಲಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು. ಬಳಿಕ ಕೆನರಾ ಟೈಮ್ಸ್ ಬಳಗ (ಕರಾವಳಿ ಅಲೆ, ಕನ್ನಡ ಜನ ಅಂತರಂಗ, ಕೆನರಾ ಟೈಮ್ಸ್), ಮಂಗಳೂರು ಮಿತ್ರ ಕನ್ನಡ ಸಂಜೆ ದಿನ ಪತ್ರಿಕೆ ಹಾಗೂ ಸಂಯುಕ್ತ ಕರ್ನಾಟಕದಲ್ಲಿ ವಿಶೇಷ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. ೧೯೯೮ರ ಜೂ.೧ರಿಂದ ಹೊಸ ದಿಗಂತ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಆರಂಭಿಸಿದ್ದರು.
ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ೨೦೦೪ರಲ್ಲಿ ತಮ್ಮ ಬರವಣಿಗೆಯ ಮೂಲಕ ಜಗತ್ತಿಗೆ ಪರಿಚಯಿಸಿದವರು ಬಾಳೇಪುಣಿಯವರು. ‘ಕಿತ್ತಳೆ ಬುಟ್ಟಿಯಲ್ಲಿ ಅರಳಿದ ಅಕ್ಷರ ಕನಸು’ ವರದಿಯ ಮೂಲಕ ಹಾಜಬ್ಬರ ಕಥಾನಕವನ್ನು ಬಾಳೇಪುಣಿಯರು ಹೊಸ ದಿಗಂತ ಪತ್ರಿಕೆಯಲ್ಲಿ ಮೊದಲಿಗೆ ಪರಿಚಯಿಸಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇವರ ಆಸಕ್ತಿಯ ವಿಷಯಗಳಾಗಿದ್ದವು.
*ಹಲವು ಪ್ರಶಸ್ತಿಗಳ ಸರದಾರ
ರಾಜ್ಯದಲ್ಲಿ ನಡೆದ ಸಾಕ್ಷರತಾ ಆಂದೋಲನದಲ್ಲಿ ಸ್ವಯಂ ಸೇವಕ, ಮುಖ್ಯ ಸ್ವಯಂಸೇವಕರಾಗಿ ಬಾಳೇಪುಣಿ ದುಡಿದಿದ್ದಾರೆ. ನಿರಂತರ ಸೇವೆ, ಉತ್ತಮ ಕಾರ್ಯಗಳಿಗಾಗಿ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ, ಗೌರವಗಳಿಗೂ ಪಾತ್ರರಾಗಿದ್ದಾರೆ. ಇವರ ವರದಿಗಳಿಗೆ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ಅತ್ಯುತ್ತಮ ಗ್ರಾಮೀಣ ವರದಿಗಾಗಿ ೨೦೦೪ರಲ್ಲಿ ಪದ್ಯಾಣ ಗೋಪಾಲಕೃಷ್ಣ ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ಜಾಗತಿಕ ಸಮಾಜ ಕಾರ್ಯ ಸಂಸ್ಥೆ ‘ಹಂಗರ್ ಪ್ರಾಜೆಕ್ಟ್’ ಅಖಿಲ ಭಾರತ ಮಟ್ಟದಲ್ಲಿ ಏರ್ಪಡಿಸುವ ‘ಮಹಿಳೆ ಮತ್ತು ಪಂಚಾಯತ್ ರಾಜ್’ ವಿಷಯಾಧಾರಿತ ವರದಿಗಾರಿಕೆ ಸ್ಪರ್ಧೆಯಲ್ಲಿ ಪ್ರಾದೇಶಿಕ ವಿಭಾಗದಲ್ಲಿ ಕನ್ನಡ ಪತ್ರಿಕೋದ್ಯಮಕ್ಕೆ ‘ಸರೋಜಿನಿ ನಾಯ್ಡು ಪ್ರಶಸ್ತಿ’ ತಂದು ಕೊಟ್ಟ ಏಕೈಕ ಪತ್ರಕರ್ತ ಬಾಳೇಪುಣಿಯವರು. ಇವರಿಗೆ ಪತ್ರಿಕೋದ್ಯಮ ಸೇವೆಗಾಗಿ ೨೦೧೨ರಲ್ಲಿ ಕಾಂತಾವರ ಕನ್ನಡ ಸಂಘದಿಂದ ‘ಕಾಂತಾವರ ಪುರಸ್ಕಾರ’ ಲಭಿಸಿತ್ತು. ೨೦೧೩ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ೨೦೨೧ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಬಾಳೇಪುಣಿಯವರಿಗೆ ಸಂದಿವೆ.

ಇತ್ತೀಚಿನ ಸುದ್ದಿ

ಜಾಹೀರಾತು