ಇತ್ತೀಚಿನ ಸುದ್ದಿ
J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!!
09/05/2025, 15:31

ಬೆಳಗಾವಿ(reporterkarnataka.com); ಕಾಶ್ಮೀರದಲ್ಲಿ ಉಗ್ರರು ನಡೆಸಿದ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂಧೂರ್ ವೈಮಾನಿಕ ದಾಳಿಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ ಎನ್ನುವುದು ಹೆಮ್ಮೆಯ ವಿಷಯ.
ಭಾರತೀಯ ಪ್ರವಾಸಿಗರ
ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತದ ಸೇನಾ ಪಡೆ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶದ ಉಗ್ರರ ಅಡಗುದಾಣಗಳಿಗೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಏರ್‌ಸ್ಟ್ರೈಕ್ ಮಾಡಿತ್ತು. ಮುಂಜಾನೆ ಸುಮಾರು 1.30 ಗಂಟೆಗೆ ನಡೆದ ಈ ವೈಮಾನಿಕ ದಾಳಿಯ ಸಾರಥ್ಯ ಕರ್ನಲ್ ಸೋಫಿಯಾ ಖುರೇಷಿ ಅವರದ್ದಾಗಿತ್ತು. ಪಾಕಿಸ್ತಾನದ ಒಳಗೆ ಸುಮಾರು 70 ಕಿಮೀ ನುಗ್ಗಿ ಲಾಹೋರ್ ಗೆ ಸಮೀಪದಲ್ಲಿರುವ ಉಗ್ರರ ಅಡಗುತಾಣದ ಮೇಲೆ ಖುರೇಷಿ ನೇತೃತ್ವದ ವಾಯುಪಡೆಯ ಸೈನಿಕರು ದಾಳಿ ನಡೆಸಿದ್ದಾರೆ. ಕೇವಲ 23 ನಿಮಿಷಗಳಲ್ಲಿ ಈ ಕಾರ್ಯಾಚರಣೆ ಮುಗಿದಿತ್ತು.
ಇದರಲ್ಲಿ 100ಕ್ಕೂ ಅಧಿಕ ಉಗ್ರರು ಕೊಲ್ಲಲ್ಪಟ್ಟಿದ್ದರು.
ಸೋಫಿಯಾ ಖುರೇಷಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ತಾಜುದ್ದೀನ್ ಬಾಗೇವಾಡಿ ಅವರನ್ನು 2015ರಲ್ಲಿ ವರಿಸಿದ್ದರು. ದಂಪತಿಗಳಿಬ್ಬರೂ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ಪ್ರೇಮಿಸಿ ವಿವಾಹವಾಗಿದ್ದರು. ಸೋಫಿಯಾ ಗುಜರಾತ್‌ನ ಬರೋಡದವರಾಗಿದ್ದು, ಸದ್ಯ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ತಾಜುದ್ದೀನ್ ಬಾಗೇವಾಡಿ ಝಾನ್ಸಿಯಲ್ಲಿ ಕರ್ನಲ್ ಆಗಿ ಸೇವಾ ನಿರತರಾಗಿದ್ದಾರೆ.
ಸೋಫಿಯಾ ಅವರ ಮಾವ ಗೌಸ್ ಸಾಬ್ ಬಾಗೇವಾಡಿ ಸೊಸೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ನಮ್ಮ ಸೊಸೆಯ ಬಗ್ಗೆ ಬಹಳ ಹೆಮ್ಮೆಯಾಗುತ್ತಿದೆ. ಮಗನ ಜೊತೆಗೆ ಮಾತಾಡಿದೆ. ಅವನೇ ಎಲ್ಲಾ ಹೇಳಿದ ಕೇಳಿದ ಮೇಲೆ ಬಹಳ ಸಂತೋಷವಾಯಿತು, ಒಂದು ರೀತಿ ಹಬ್ಬದ ವಾತಾವರಣ ನಮ್ಮನೆಯಲ್ಲಿತ್ತು ಎಂದರು.
ಮಗ ಸೊಸೆ ಇಬ್ಬರೂ ರಜಾ ಸಮಯದಲ್ಲಿ ಇಲ್ಲಿಗೆ ಬರುತ್ತಾರೆ. ಬಂದಾಗ ಆರಾಮವಾಗಿ ಇರುತ್ತಾರೆ, ಅವರಿಗೆ ನಮ್ಮ ಜವಾರಿ ಕೋಳಿ ಊಟ ಬಹಳ ಇಷ್ಟ ಆಗಿದೆ. ನಮ್ಮ ಊರಿನ ಬಗ್ಗೆಯೂ ಖುಷಿ ವ್ಯಕ್ತಪಡಿಸುತ್ತಾರೆ, ನಮ್ಮ ಆರೋಗ್ಯದ ಬಗ್ಗೆಯೂ ಕೇಳುತ್ತಿರುತ್ತಾಳೆ ಎಂದರು. ಮಗ ಮರಡಿಮಟ ಗ್ರಾಮದ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿ ಶ್ರಮದಿಂದ ಕರ್ನಲ್ ಆಗಿದ್ದಾನೆ ಎಂದು ಸಂತಸ ವ್ಯಕ್ತಪಡಿಸಿದರು.