10:22 PM Sunday2 - March 2025
ಬ್ರೇಕಿಂಗ್ ನ್ಯೂಸ್
Accident | ಪುತ್ತೂರು: ಭೀಕರ ರಸ್ತೆ ಅಪಘಾತ; ಮಗು ಸಹಿತ ಇಬ್ಬರ ದಾರುಣ… JDS Meeting | ಬೆಂಗಳೂರಿನಲ್ಲಿ ಜೆಡಿಎಸ್ ಮಹತ್ವದ ಸಭೆ: ಮಾಜಿ ಪ್ರಧಾನಿ ದೇವೇಗೌಡರು,… Water | ನಾರಾಯಣಪುರ ಕಾಲುವೆಗೆ ಏ.15ರವರೆಗೆ ನೀರು ಹರಿಸಲು ರೈತ ಸಂಘ ಮುಖಂಡರು… Central Govt purchase | ಬೆಂಬಲ ಬೆಲೆಯಲ್ಲಿ ಕುಸುಬೆ ಖರೀದಿ: ಕೃಷಿ ಮಾರುಕಟ್ಟೆ… Double Murder | ಬೆಂಗಳೂರು; ಇಬ್ಬರ ಕೊಲೆಗೈದ ಆರೋಪಿಗೆ 10 ವರ್ಷ ಶಿಕ್ಷೆ;… Mangaluru | ಅಂತರ್ ಜಿಲ್ಲಾ ಖದೀಮ ಕಳ್ಳನ ಸೆರೆ: 20ಕ್ಕೂ ಹೆಚ್ಚು ದ್ವಿಚಕ್ರ… Valmiki Community | ವಾಲ್ಮೀಕಿ ಹೆಸರಲ್ಲಿ ಮೆಡಿಕಲ್ ಕಾಲೇಜು: ಮಾಜಿ ಸಂಸದ ಉಗ್ರಪ್ಪ… ಮೂಡಿಗೆರೆ: ಸರಕಾರಿ ಬಸ್ ಮತ್ತು ಪಿಕಪ್ ವಾಹನ ಮುಖಾಮುಖಿ ಡಿಕ್ಕಿ; ಅದೃಷ್ಟವಶಾತ್ ಎಲ್ಲರೂ… Local politics | ಮೂಡಿಗೆರೆ ಪಟ್ಟಣ ಪಂಚಾಯಿತಿ: ಕ್ಷಿಪ್ರ ರಾಜಕೀಯ ಬೆಳವಣಿಗೆ: ಅಧ್ಯಕ್ಷ… STUDENT NATIONAL SEMINAR | ಬೆಂಗಳೂರಿನ ಸೈಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಕಾಲೇಜಿನಲ್ಲಿ…

ಇತ್ತೀಚಿನ ಸುದ್ದಿ

JDS Meeting | ಬೆಂಗಳೂರಿನಲ್ಲಿ ಜೆಡಿಎಸ್ ಮಹತ್ವದ ಸಭೆ: ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಕುಮಾರಸ್ವಾಮಿ ಭಾಗಿ

02/03/2025, 20:46

ಬೆಂಗಳೂರು(reporterkarnataka.com): ಪಕ್ಷದ ದ್ವೈವಾರ್ಷಿಕ ಚುನಾವಣೆ, ಸದಸ್ಯತ್ವ ಅಭಿಯಾನ ಹಾಗೂ ಮುಂಬರುವ ತಾಲ್ಲೂಕು-ಜಿಲ್ಲಾ ಪಂಚಾಯಿತಿ ಚುನಾವಣೆ, ವಿಧಾನಮಂಡಲ ಕಲಾಪದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಇತ್ಯಾದಿ ಅಂಶಗಳ ಬಗ್ಗೆ ಜೆಡಿಎಸ್ ಮಹತ್ವದ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ಮೇಲಿನ ಎಲ್ಲ ವಿಷಯಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಯಿತು. ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪಕ್ಷದ ವತಿಯಿಂದ ಸದಸ್ಯತ್ವ ಅಭಿಯಾನ ಚಾಲ್ತಿಯಲ್ಲಿದ್ದು, ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮುಖಂಡರ ಜತೆ ತಮ್ಮದೇ ಆದ ಪರಿಕಲ್ಪನೆಗಳನ್ನು ಹಂಚಿಕೊಂಡರು.
ಸದಸ್ಯತ್ವ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಬೇಕು. ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಎರಡನೇ ಹಂತದ ನಾಯಕರು ಹಾಗೂ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಇದಕ್ಕೆ ಸ್ಪಂದಿಸಿದ ಮಾಜಿ ಪ್ರಧಾನಿಗಳಾದ ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು, ಸದಸ್ಯತ್ವ ನೋಂದಣಿಯನ್ನು ಎಲ್ಲಾ ಮುಖಂಡರು ಗಂಭೀರವಾಗಿ ಪರಿಗಣಿಸಬೇಕು. ಸಂಘಟನೆಯ ಬಗ್ಗೆ ಅಸಡ್ಡೆ ಬೇಡ ಎಂದು ಕಿವಿಮಾತು ಹೇಳಿದರು.
ಹಿಂದೆ ಇಪ್ಪತ್ತಮೂರು ಜಿಲ್ಲೆಗಳು ಇದ್ದವು. ನಾನು ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲಿ ಪ್ರವಾಸ ಮಾಡಿದ್ದೇನೆ. ಕಷ್ಟಪಟ್ಟು ಪಕ್ಷ ಕಟ್ಟಿದ್ದೇನೆ. ಈಗಲೂ ಓಡಾಟ ಮಾಡುತ್ತಿದ್ದೇನೆ. ಪಕ್ಷ ಕಟ್ಟೋದು ಸುಲಭದ ಕೆಲಸವಲ್ಲ. ಹೀಗಾಗಿ ಯಾರೊಬ್ಬರೂ ಸಂಘಟನೆಯನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ ಎಂದು ಮಾಜಿ ಪ್ರಧಾನಿಗಳು ಮುಖಂಡರಿಗೆ ತಾಕೀತು ಮಾಡಿದರು.
ಯಾರೂ ಎದೆಗುಂದಬೇಕಿಲ್ಲ. ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಸಮಾವೇಶಗಳನ್ನು ಮಾಡೋಣ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗಳನ್ನು ಹುಡುಕಿ ಪಟ್ಟಿ ಮಾಡಿ. ಯಾರೂ ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎಂದು ಕರೆಯಬೇಡಿ. ಒಬ್ಬ ಕಾರ್ಯಕರ್ತ ಎಂದು ಕರೆಯಿರಿ ಸಾಕು. ಎಲ್ಲಿಗೆ ಬೇಕಾದರೂ ಕರೆಯಿರಿ, ಬರುತ್ತೇನೆ. ನಿಮ್ಮ ಜತೆಯಲ್ಲಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿಗಳು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

*ಚುನಾವಣೆ ಬಂದಾಗ ಎಚ್ಚೆತ್ತುಕೊಂಡರೆ ಉಪಯೋಗವಿಲ್ಲ: ಹೆಚ್ಡಿಕೆ*
ಲೋಕಸಭೆ, ವಿಧಾನಸಭೆ ಅಥವಾ ಇನ್ನಾವುದೇ ಚುನಾವಣೆ ಬಂದಾಗ ಎಚ್ಚೆತ್ತರೆ ಉಪಯೋಗ ಇಲ್ಲ. ಹಲವು ವರ್ಷಗಳಿಂದಲೇ ನಾವು ಸಂಘಟನೆಗೆ ಶಕ್ತಿ ತುಂಬಿ ಜನರ ಜತೆ ಇದ್ದರೆ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಬಹುದು. ಇಲ್ಲವಾದರೆ ನಮ್ಮ ಶ್ರಮ ವ್ಯರ್ಥವಾಗುತ್ತದೆ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ನಾಯಕನಾಗುವ ಕನಸು ಕಟ್ಟಿಕೊಂಡರೆ ಸಾಲದು. ಅದಕ್ಕೆ ಮೂಲ ಬಂಡವಾಳ ಎಂದರೆ ಪಕ್ಷ ಸಂಘಟನೆ. ನಿಮ್ಮ ಕ್ಷೇತ್ರ, ಮತಗಟ್ಟೆ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಂಘಟನೆಯನ್ನು ಬಲವಾಗಿ ಕಟ್ಟಿ. ಸದಸ್ಯತ್ವ ಅಭಿಯಾನವನ್ನು ವೇಗಯುತವಾಗಿ ನಡೆಸಬೇಕು. ಯುವಜನರು, ರೈತರು, ಕೃಷಿ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಬೇಕು ಎಂದು ಸಚಿವರು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಬಿ.ಎಂ.ಫಾರೂಕ್, ಜೆಡಿಎಸ್ ರಾಜ್ಯ ಮಹಿಳಾ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶೆಂಪೂರ್, ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಡಾ. ಕೆ.ಅನ್ನದಾನಿ, ಕೆ.ಎ. ತಿಪ್ಪೇಸ್ವಾಮಿ ಮುಂತಾದವರು ವೇದಿಕೆಯ ಮೇಲಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು