ಇತ್ತೀಚಿನ ಸುದ್ದಿ
ಜನಮೆಚ್ಚುಗೆ ಪಡೆದ ಮಣೆ ಮಂಚೊದ ಮಂತ್ರಮೂರ್ತಿ: ಗೋಪಿನಾಥ್ ಭಟ್ಟರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ
13/09/2023, 21:17

ಮಂಗಳೂರು(reporterkarnataka.com): ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ಪುರಭವನದಲ್ಲಿ ಶ್ರೀಪ್ರಾಪ್ತಿ ಕಲಾವಿದೆರ್‌ಕುಡ್ಲ ತಂಡದ ಮಣೆ ಮಂಚೊದ ಮಂತ್ರಮೂರ್ತಿ ನಾಟಕ ಚೊಚ್ಚಲ ಪ್ರದರ್ಶನದಲ್ಲಿಯೇ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕ ವರ್ಗದ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭ ಚತುರ್ಭಾಷಾ ಕಲಾವಿದ, ರಂಗಭೂಮಿ ದಿಗ್ಗಜ ಗೋಪಿನಾಥ್‌ಭಟ್‌ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ದೈವಾರಾಧಕ ಸೀನ ಶೆಡ್ಯ ಅವರಿಗೆ ಗೌರವ ಸನ್ಮಾನ ನಡೆಯಿತು.
ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿ, ಕುಂದೇಶ್ವರ ಪ್ರತಿಷ್ಠಾನ ಹತ್ತು ಹಲವು ವರ್ಷಗಳಿಂದ ಧಾರ್ಮಿಕ, ಸಾಂಕೃತಿಕ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದು, ನಾಟಕ, ಯಕ್ಷಗಾನಗಳ ಪ್ರದರ್ಶನ ಮಾತ್ರವಲಲದೆ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಿದೆ. ಮಣಿಮಂಚೊದ ಮಂತ್ರಮೂರ್ತಿ ನಾಟಕದಲ್ಲಿ ಮನೋರಂಜನೆ ಜತೆಗೆ ಭಕ್ತಿ ಭಾವವೂ ಲಭಿಸುವ ಮೂಲಕ ಪ್ರೇಕ್ಷಕರಿಗೆ ಹೆಚ್ಚಿನ ರಸಾನುಭೂತಿ ಸಿಗಲಿದೆ ಎಂದರು.
ತೆಲಿಕೆದ ಬೊಳ್ಳಿ ದೇವದಾಸ್‌ಕಾಪಿಕಾಡ್ ಮಾತನಾಡಿ, ಜನಪದೀಯ, ಪೌರಾಣಿಕ ನಾಟಕ ಪ್ರದರ್ಶನ ಸುಲಭ ಸಾಧ್ಯವಲ್ಲ. ಇದೀಗ ದೈವಭಕ್ತಿಯ ನಾಟಕಗಳು ಅತುತ್ತಮ ಪ್ರದರ್ಶನ ಕಾಣುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಭಾನ್ವಿತ ಪ್ರಶಾಂತ್ ಸಿ.ಕೆ. ವಿರಚಿತ ಪಾಡ್ದನ ಆಧರಿತ ಮಂತ್ರಮೂರ್ತಿ ನಾಟಕ ಜನರ ಅಪಾರ ಮೆಚ್ಚುಗೆ ಗಳಿಸುವುದರಲ್ಲಿ ಸಂಶಯ ಇಲ್ಲ ಎಂದರು.
ಕಲಾಮಾಣಿಕ್ಯ ವಿಜಯಕುಮಾರ್‌ಕೊಡಿಯಾಲಬೈಲ್ ಮಾತನಾಡಿ, ಜನಪದೀಯ ನಾಟಕಗಳು ಹೆಚ್ಚಿನ ಪ್ರದರ್ಶನ ಕಾಣುವಂತಾಗಬೇಕು ಎಂದರು.
ಕಲಾವಿದ/ ಪತ್ರಕರ್ತ ವಾಲ್ಟರ್ ನಂದಳಿಕೆ ಮಾತನಾಡಿ, ಗೋಪಿನಾಥ್ ಭಟ್ ಅವರಂತಹ ನಾಡು ಮೆಚ್ಚುವ ಕಲಾವಿದರನ್ನು ಗೌರವಿಸುವ ಮೂಲಕ ಪ್ರಶಸ್ತಿಗೆ ಗೌರವ ಬಂದಿದೆ. ಪ್ರತಿಭಾನ್ವಿತ ಕಲಾವಿದರೇ ಇರುವ ತುಳು ನಾಟಕ ನೂರಾರು ಪ್ರದರ್ಶನಗಳನ್ನು ಕಾಣಲಿ ಎಂದು ಆಶಿಸಿದರು.
ನಿವೃತ್ತ ಸೇನಾಧಿಕಾರಿ ಕ್ಯಾ.ಬ್ರಿಜೇಶ್‌ಚೌಟ, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಸಿನಿಮಾ ನಿರ್ಮಾಪಕ ಮಾಧವ ನಾಯ್ಕ್ ಅಡ್ಯಾರ್, ಉದ್ಯಮಿ ಕುಂಜತ್ತೋಡಿ ವಾಸುದೇವ ಭಟ್, ವೈಭವ್ ಮೆಡಿಕಲ್ಸ್ ಮಾಲೀಕ ಸಚ್ಚಿದಾನಂದ ಎಡಮಲೆ, ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜೃಾಜೇಶ್ವರಿ ದೇವಸ್ಥಾನದ ಮೊಕ್ತೇಸರ ವಿವೇಕಾನಂದ ಸನಿಲ್ ಇದ್ದರು.
ಕುಂದೇಶ್ವರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ಪ್ರಾಪ್ತಿ ಕಲಾವಿದೆರ್ ತಂಡದ ಸ್ಥಾಪಕ ಪ್ರಶಾಂತ್ ಸಿ.ಕೆ. ವಂದಿಸಿದರು,. ರಿಷಿಕಾ ಕುಂದೇಶ್ವರ ಪ್ರಾರ್ಥಿಸಿದರು. ವಿ.ಜೆ. ಮಧುರಾಜ್ ನಿರೂಪಿಸಿದರು. ಸಂಚಾಲಕ ಮುಖೇಶ್ ಶೆಟ್ಟಿ ಆಕಾಶಭವನ, ಸಹಸಂಚಾಲಕರಾದ ಜೆ.ಕೆ. ರೈ, ಜಗದೀಶ್ ಅಡ್ಯಾರ್, ಶ್ರೀಕಾಂತ್ ಮಾಡೂರು, ವಿಜೇಶ್ ದೇವಾಡಿಗ ಮಂಗಳಾದೇವಿ, ಸುಹಾನ್ ಕುಳಾಯಿ ಸಹಕರಿಸಿದರು.