ಇತ್ತೀಚಿನ ಸುದ್ದಿ
ಈಶ್ವರಪ್ಪ ಬಂಧನ ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದ್ದು: ಮುಖ್ಯಮಂತ್ರಿ ಬೊಮ್ಮಾಯಿ
15/04/2022, 20:48

ಬೆಂಗಳೂರು(reporterkarnataka.com): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೆ.ಎಸ್. ಈಶ್ವರಪ್ಪ ಅವರ ಬಂಧನ ತನಿಖಾಧಿಕಾರಿಗೆ ಬಿಟ್ಟ ವಿಷಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದಾರೆ. ಅವರ ಮೇಲೆ ಎಫ್ ಐಆರ್ ಆಗಿದೆ. ತನಿಖೆ ನಡೆಯುತ್ತಿದೆ. ಈಶ್ವರಪ್ಪ ಅವರ ಬಂಧನ ವಿಷಯ ತನಿಖಾಧಿಕಾರಿಯವರ ವಿವೇಚನಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ನುಡಿದರು.
ಈಶ್ವರಪ್ಪ ಅವರ ವಿರುದ್ಧ 40% ಕಮಿಷನ್ ಆರೋಪ ಮಾಡಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದ ಗುತ್ತಿಗೆದಾರ ಸಂತೋಷ್ ಅವರು ಉಡುಪಿಗೆ ಆಗಮಿಸಿ, ಇಲ್ಲಿನ ಖಾಸಗಿ ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಂತೋಷ್ ಆತ್ಮಹತ್ಯೆ ಮಂಗಳವಾರ ಬೆಳಕಿಗೆ ಬಂದಿತ್ತು. ಬುಧವಾರ ರಾತ್ರಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಯಲ್ಲಿರುವ ಹುಟ್ಟೂರಿಗೆ ಕಳುಹಿಸಲಾಗಿತ್ತು. ಗುರುವಾರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಈ ನಡುವೆ ಮೃತ ಸಂತೋಷ್ ಅವರ ಸಹೋದರ ಹಾಗೂ ಪತ್ನಿ ಈಶ್ವರಪ್ಪ ಅವರ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಕೂಡ ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.