ಇತ್ತೀಚಿನ ಸುದ್ದಿ
ಹಾವೇರಿ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ?: ರಾಜಕೀಯ ಕರಿನೆರಳು.!?
21/02/2025, 18:00

ಕೆ.ಶಿವು ಲಕ್ಕಣ್ಣವರ ಹುಬ್ಬಳ್ಳಿ
info.reporterkarnataka@gmail.com
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅರ್ಧರಾತ್ರಿಯಲ್ಲಿ ಸಂದರ್ಶನ ಮಾಡಿ ಅಕ್ರಮ ನೇಮಕಾತಿ ನಡೆದಿರುವ ಸಂಗತಿಯನ್ನು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಬಹಿರಂಗಪಡಿಸಿದ್ದಾರೆ. ಈ ನೇಮಕಾತಿ ರದ್ದು ಪಡಿಸಿ ತನಿಖೆ ನಡೆಸಬೇಕೆಂದು ಅವರು ಒತ್ತಾಹಿಸಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಜಗತ್ತಿನಲ್ಲಿಯೇ ಜಾನಪದಕ್ಕಾಗಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾಲಯವಾಗಿದೆ.
ಕರ್ನಾಟಕ ಜಾನಪದ ಅಕಾಡೆಮಿಯ ನಿರ್ಣಯದ ಮೂಲಕ ಅನೇಕ ಹಿರಿಯರ ಪ್ರಯತ್ನ ಮತ್ತು ಮಾರ್ಗದರ್ಶನದ ಮೂಲಕ ಕರ್ನಾಟಕದಲ್ಲಿ ಜಾನಪದವನ್ನು ಸಮೃದ್ಧಗೊಳಿಸುವ ಕಾರಣಕ್ಕಾಗಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ ಎಂದಿರುವ ರಮೇಶ್ ಬಾಬು, ಇತರೆ ವಿಶ್ವವಿದ್ಯಾಲಯಗಳ ರೀತಿಯಲ್ಲಿ ಜಾನಪದ ವಿಶ್ವವಿದ್ಯಾಲಯವು ತನ್ನ ಮೂಲ ಸೆಲೆಯನ್ನು ಕಳೆದುಕೊಂಡು ವ್ಯಾಪಾರಿ ವಿಶ್ವವಿದ್ಯಾಲಯವಾಗಿ ಪರಿವರ್ತನೆಯಾದರೆ ಈ ವಿಶ್ವವಿದ್ಯಾಲಯದ ಸ್ಥಾಪನೆಯ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಗಮನಸೆಳೆದಿದ್ದಾರೆ.
*ಏನಿದು ಅವಾಂತರ?*
ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆದಿದ್ದು, ಇದೀಗ ಪೂರ್ಣ ಪ್ರಮಾಣದ ಮಂತ್ರಿಮಂಡಲ ರಚನೆಯಾಗಿದೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಚಿವರಿಗೆ ಖಾತೆ ಹಂಚಿಕೆ ಆಗುವ ಮೊದಲೇ ದುರುದ್ದೇಶಪೂರಿತವಾಗಿ ಜಾನಪದ ವಿಶ್ವವಿದ್ಯಾಲಯದಲ್ಲಿ ರಾತೋರಾತ್ರಿ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಯನ್ನು ನಿಯಮಾವಳಿ ಮೀರಿ ಅಕ್ರಮವಾಗಿ ನೇಮಕ ಮಾಡಲಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಿದ್ದ ಸಂದರ್ಭದಲ್ಲಿ ಸಹಾಯಕ ಪ್ರಾದ್ಯಾಪಕರು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಆತುರ ಆತುರವಾಗಿ ಅರ್ಹತಾ ಪರೀಕ್ಷೆಗಳನ್ನು ನಡೆಸಲಾಗಿದೆ.
ತದನಂತರ ರಾಜ್ಯದಲ್ಲಿ ಜವಾಬ್ದಾರಿಯುತ /ಚುನಾಯಿತ ಸರ್ಕಾರ ಇಲ್ಲದ ಸಂದರ್ಭದಲ್ಲಿ ಸ್ವಜನ ಪಕ್ಷಪಾತದ ಕಾರಣಕ್ಕಾಗಿ ಮತ್ತು ನೇಮಕಾತಿಗಳಲ್ಲಿ ಹಣದ ವ್ಯವಹಾರವನ್ನು ನಡೆಸುವ ಕಾರಣಕ್ಕಾಗಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕಾತಿಗೆ ಚಾಲನೆ ನೀಡಲಾಗಿದೆ.
ಅರ್ಧ ರಾತ್ರಿಯಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿ ಕಾನೂನುಬಾಹಿರವಾಗಿ ಗೊತ್ತುವಳಿಗಳನ್ನು ಮಾಡುವುದರ ಮೂಲಕ ಅನೇಕ ಅನುಮಾನಗಳಿಗೆ ಅವಕಾಶ ನೀಡಲಾಗಿದೆ ಎಂಬುದು ರಮೇಶ್ ಬಾಬು ಆವರ ಆರೋಪ.
ಕಲ್ಯಾಣ ಕರ್ನಾಟಕದ 371ಜೆ ಅಡಿಯಲ್ಲೂ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು ನೇಮಕಾತಿಯ ಪ್ರಕ್ರಿಯೆಗಳನ್ನು ನಡೆಸಲಾಗಿರುತ್ತದೆ. ಒಟ್ಟಾರೆ ಜಾನಪದ ವಿಶ್ವವಿದ್ಯಾಲಯದ ಅರ್ಧರಾತ್ರಿಯ ನೇಮಕಾತಿ ಪ್ರಕರಣಗಳು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದ್ದು, ಅಕ್ರಮದ ವಾಸನೆಯನ್ನೂ ತೆರೆದಿಟ್ಟಿದೆ. ರಾಜ್ಯದ ಜಾನಪದ ಕಲೆಯ ಪ್ರತಿಬಿಂಬವಾದ ಜಾನಪದ ವಿಶ್ವವಿದ್ಯಾಲಯದಲ್ಲಿ ಇಂತಹ ಅಕ್ರಮಗಳಿಗೆ ಅವಕಾಶವನ್ನು ನೀಡುವ ಮೂಲಕ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಇತರೆ ಅಧಿಕಾರಿಗಳು ತಮ್ಮ ಶಾಮೀಲುತನವನ್ನು ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸೂಕ್ತವಾದ ತನಿಖೆಯ ಹೊರತು ಅಕ್ರಮವನ್ನು ಬಯಲಿಗೆಳೆಯಲು ಸಾಧ್ಯವಿಲ್ಲ ಎಂದವರು ಸಿಎಂಗೆ ಮನವರಿಕೆ ಮಾಡಿದ್ದಾರೆ.
*ರಾಜಕೀಯ ನಾಯಕರ ಕರಿನೆರಳು..?*
ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ 2018ರಲ್ಲಿ ಸದರಿ ವಿಶ್ವವಿದ್ಯಾಲಯದಿಂದ ನೇಮಕಾತಿಗಾಗಿ ಅರ್ಜಿಗಳನ್ನು ಕರೆಯಲಾಗಿತ್ತು.
ಕಳೆದ ಐದು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ಚಾಲನೆಯಲ್ಲಿ ಇಟ್ಟಿದ್ದ ಜಾನಪದ ವಿಶ್ವವಿದ್ಯಾಲಯವು, ಚುನಾವಣೆ ನಂತರ ಆತುರ ಆತುರವಾಗಿ ಅಭ್ಯರ್ಥಿಗಳನ್ನು ರಾತ್ರೋರಾತ್ರಿ ಸಂದರ್ಶನಕ್ಕೆ ಕರೆದು ನೇಮಕಾತಿ ಪ್ರಕ್ರಿಯೆಗೆ ಚಾಲನೆ ಕೊಟ್ಟು ಅಕ್ರಮಕ್ಕೆ ಅವಕಾಶ ನೀಡಿದೆ.
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಈ ಅಕ್ರಮ ತಡೆಯುವ ಪ್ರಯತ್ನವನ್ನು ಮಾಡಿಲ್ಲ.
ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವ ಮತ್ತು ಇತರೆ ಅಧಿಕಾರಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಮತ್ತು ರಾಜ್ಯ ಸರ್ಕಾರವನ್ನು ಕತ್ತಲಲ್ಲಿ ಇಟ್ಟು ಅಕ್ರಮಕ್ಕೆ ಮುಂದಾಗಿದ್ದಾರೆಯೇ?
ಈ ವಿಶ್ವವಿದ್ಯಾಲಯವು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ವಿಶ್ವವಿದ್ಯಾಲಯದ ನಡೆ ರಾಜಕೀಯ ಹಸ್ತಕ್ಷೇಪದ ಕರಿ ನೆರಳಿನಿಂದಲೂ ಕೂಡಿದೆ ಎಂಬುದು ರಮೇಶ್ ಬಾಬು ಆರೋಪ.
ಈ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಅಭಿಪ್ರಾಯ ಪಟ್ಟಿರುವ ರಮೇಶ್ ಬಾಬು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಕೂಡಲೇ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಬೇಕು ಹಾಗೂ ಈ ವಿಶ್ವವಿದ್ಯಾಲಯದ ಕಾನೂನುಬಾಹಿರ ನಡೆಯನ್ನು ವಿಶೇಷ ತನಿಖಾ ಸಂಸ್ಥೆಯ ಮೂಲಕ ತನಿಖೆಗೆ ಒಳಪಡಿಸಬೇಕು ಎಂದು ಮುಖ್ಯಮಂತ್ರಿಯನ್ನು ಕೋರಿದ್ದಾರೆ.