ಇತ್ತೀಚಿನ ಸುದ್ದಿ
ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಜತೆ ವಿಶ್ವ ಸುಂದರಿ ಸುಶ್ಮಿತಾ ಸೇನ್ ಕಲ್ಯಾಣ?: ಲಲಿತ್ ಈ ಕುರಿತು ಟ್ವೀಟ್ ಮಾಡಿದ್ದೇನು?
16/07/2022, 09:41

ಮುಂಬೈ(reporterkarnataka.com):
ಐಪಿಎಲ್ ಸಂಸ್ಥಾಪಕ, ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಬಾಲಿವುಡ್ ನ ವಿಫಲ ತಾರೆ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರ ಜತೆ ವಿವಾಹ ಆಗುತ್ತಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇದಕ್ಕೆ ಲಲಿತ್ ಮೋದಿ ಅವರು ಸುಶ್ಮಿತಾ ಜತೆಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದೇ ಮುಖ್ಯ ಕಾರಣವಾಗಿದೆ.
ಲಲಿತ್ ಮೋದಿ ಅವರು ಟ್ವೀಟ್ ಮಾಡಿ, ಸುಶ್ಮಿತಾ ಸೇನ್ ಮತ್ತು ತಾವು ಜತೆಗಿರುವ ಕೆಲವೊಂದು ಭಾವಚಿತ್ರಗಳನ್ನು ಹಂಚಿಕೊಂಡು, ʻಬೆಟರ್ ಹಾಫ್ʼ ಮತ್ತು `ನ್ಯೂ ಬಿಗಿನಿಂಗ್’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಮದುವೆಯಲ್ಲ; ಬರೀ ಡೇಟಿಂಗ್, ಅದು ಒಂದು ದಿನ ಎಂದಿರುವ ಮೋದಿ ಈಗ ಮಾಲ್ಡೀವ್ಸ್‌ನಿಂದ ಲಂಡನ್‌ಗೆ ವಾಪಾಸ್ಸಾಗಿರುವುದಾಗಿ ಹೇಳಿದ್ದಾರೆ.
ಲಲಿತ್ ಮೋದಿ ಅವರು ಕ್ರಿಕೆಟ್ ಲೋಕಕ್ಕೆ ಲೀಗ್ ಮಾದರಿಯ ಟೂರ್ನಿಯನ್ನು ಪರಿಚಯಿಸಿದವರು.
2008ರಲ್ಲಿ ಲಲಿತ್ ಮೋದಿ ಆರಂಭಿಸಿದ IPL, ಇಂದು ವಿಶ್ವದ ಜನಪ್ರಿಯ ಟೂರ್ನಿಗಳಲ್ಲಿ ಒಂದಾಗಿದ್ದು, ಶ್ರೀಮಂತ ಕ್ರಿಕೆಟ್ ಟೂರ್ನಿ ಅಂತಾನೂ ಖ್ಯಾತಿ ಪಡೆದಿದೆ.
ಆದರೆ, IPLನಲ್ಲಿ ಹಣಕಾಸಿನ ಹಗರಣದ ಆರೋಪ ಎದುರಿಸುತ್ತಿರುವ ಲಲಿತ್ 2010ರಲ್ಲಿ ಭಾರತ ತೊರೆದು ಓಡಿಹೋಗಿದ್ದರು. ಅಂದಿನಿಂದ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಆದರೀಗ, ನಟಿ ಸುಶ್ಮಿತಾ ಸೆನ್ ಜತೆ ಕಾಣಿಸಿಕೊಂಡಿದ್ದಾರೆ.
ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್‌ನಲ್ಲಿರುವುದಾಗಿ ಘೋಷಿಸಿಕೊಂಡಿದ್ದು, ಮುಂದೊಂದು ದಿನ ಮದುವೆ ಆಗುವುದಾಗಿಯೂ ಹೇಳಿಕೊಂಡಿದ್ದಾರೆ.
ಸುಶ್ಮಿತಾ ಸೇನ್ ಈ ಮೊದಲು ರೋಹ್ಮನ್ ಶಾವ್ಲ್ ಅವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದು, ಸ್ನೇಹಿತರಾಗಿಯೇ ಇದ್ದು, ಮುಂದೆಯೂ ಸ್ನೇಹಿತರಾಗಿಯೇ ಇರುತ್ತೇವೆ ಎಂದಿದ್ದರು. ಸುಶ್ಮಿತಾ ಸೇನ್ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು, ಈಗ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ.