ಇತ್ತೀಚಿನ ಸುದ್ದಿ
ಪತ್ರಿಕೋದ್ಯಮದಲ್ಲಿ ಆಂತರಿಕ ಧರ್ಮ ಪರಿಪಾಲಿಸಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್
05/07/2025, 00:17

ಬೆಂಗಳೂರು(reporterkarnataka.com): ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಇದು ಅಧಿಕಾರವನ್ನು ರಕ್ಷಿಸುವುದಲ್ಲ, ಬದಲಿಗೆ ಆಲೋಚನೆಗಳನ್ನು ಪ್ರಚೋದಿಸಬೇಕು. ಆದರೆ ಪ್ರಚೋದನಕಾರಿಯಾಗಬಾರದು.
ಸ್ವಾತಂತ್ರ್ಯವನ್ನು ಉತ್ತೇಜಿಸುವ ಜೊತೆಗೆ ನಿಷ್ಠುರವಾಗಿರಬೇಕು ಮತ್ತು ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್ ಹೇಳಿದ್ದಾರೆ.
ನಗರದ ಭಾರತೀಯ ವಿದ್ಯಾಭವನದಲ್ಲಿ ವಕೀಲರ ವಾಹಿನಿ ಮೂಲಕ ಆಯೋಜಿಸಿದ್ದ “ಮಾಧ್ಯಮಗಳ ಸ್ವಾತಂತ್ರ್ಯ ಮತ್ತು ನಿರ್ಬಂಧ, ಸಮತೋಲನ ಕಾಯ್ದೆ” ಕುರಿತು ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಸ್ಮಾರಕ ಉಪನ್ಯಾಸ ನೀಡಿದ ಅವರು, ಮಾಧ್ಯಮ ಸತ್ಯವನ್ನು ಎತ್ತಿ ಹಿಡಿಯಬೇಕು. ಮಾಧ್ಯಮದ ನಾಲಿಗೆಗೆ ಸ್ವಾತಂತ್ರ್ಯವಿರಬಹುದು. ಆದರೆ ವಿವೇಚನೆ ಹೊಂದಿರಬೇಕು. ಸಂಪಾದಕರು, ನಿರೂಪಕರು, ಡಿಜಿಟಲ್ ಪ್ರಭಾವಿಗಳು ಮಾಧ್ಯಮವನ್ನು ಪ್ರಚೋದನೆಗಾಗಿ ಬಳಸಿಕೊಳ್ಳಬಾರದು. ನೈತಿಕ ಸ್ಫೂರ್ತಿಯ ಮೂಲಕ ಸ್ವಧರ್ಮವನ್ನು ಕಾಪಾಡಬೇಕು. ಪತ್ರಿಕೋದ್ಯಮದಲ್ಲಿ ಆಂತರಿಕ ಧರ್ಮವನ್ನು ಪರಿಪಾಲಿಸಬೇಕು. ಪತ್ರಿಕೋದ್ಯಮ ಎಂದರೆ ಸತ್ಯ ಪರಿಶೋಧನೆಯಾಗಿದ್ದು, ಯಾರಿಗೂ ಹಾನಿ ಮಾಡಬಾರದು. ಸಾರ್ವಜನಿಕ ಹಿತಾಸಕ್ತಿ ಜೊತೆಗೆ ಜವಾಬ್ದಾರಿತನದಿಂದ ಮುನ್ನಡೆಯಬೇಕು ಎಂದು ಹೇಳಿದರು.
ಮಾಧ್ಯಮಗಳು ತನಿಖಾ ಪತ್ರಿಕೋದ್ಯಮಕ್ಕೆ ಉತ್ತೇಜನ ನೀಡಬೇಕು. ಹಾಗೆಂದು ತೀರ್ಪು ನೀಡಲು ಹೋಗಬಾರದು. ಮಾಧ್ಯಮ ಸ್ವಾತಂತ್ರ್ಯ ಪ್ರಕಟಣೆಗಷ್ಟೇ ಸೀಮಿತವಲ್ಲ, ಬದಲಿಗೆ ವ್ಯವಸ್ಥೆಗೆ ಒಂದು ಸ್ಪಷ್ಟ ಸ್ವರೂಪ ನೀಡಬೇಕು. ಪತ್ರಿಕೋದ್ಯಮ ಮುಕ್ತವಾಗಿ ಅಷ್ಟೇ ಅಲ್ಲದೇ ಸರಿಯಾಗಿ ಮಾತನಾಡಬೇಕು. ಮಾಧ್ಯಮ ಎಂಬುದು ಋಷಿಯಂತೆ. ಸತ್ಯಕ್ಕಾಗಿ ನಿರಂತರವಾಗಿ ಪ್ರಶ್ನೆ ಮಾಡಬೇಕು. ವ್ಯಕ್ತಿಗಳ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಮಾಧ್ಯಮ ಸ್ವಾತಂತ್ರ್ಯ ಎಂದರೆ ಅದು ಸಾಂವಿಧಾನದ ನೈತಿಕತೆಯಾಗಿದ್ದು, ಅದು ಕಾನೂನಿನ ಹಕ್ಕು ಅಲ್ಲ. ಅದು ನೈತಿಕತೆಯನ್ನು ಕಾಪಾಡಿಕೊಂಡು ಹೋಗುವಂತಿರಬೇಕು. ಸ್ವಯಂ ನಿಯಂತ್ರಣಕ್ಕೆ ಒಳಪಡಬೇಕು. ಪತ್ರಕರ್ತರು ಮತ್ತು ವೈದ್ಯರು ಸಾಮಾಜಿಕ ವೈದ್ಯರು ಎಂದು ವಿಶ್ಲೇಷಿಸಿದರು.
ಜಸ್ಟೀಸ್ ಕೆ.ಆರ್, ಗೋಪಿ ವಲ್ಲಭ ತುಮಕೂರಿನವರು, ಆಗಿನ ಮೈಸೂರು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ನಿಟ್ಟೂರು ಶ್ರೀನಿವಾಸ ರಾವ್ ಅವರಲ್ಲಿ ಕಿರಿಯ ವಕೀಲರಾಗಿ ಕೆಲಸ ಮಾಡಿದ್ದರು. ಒಮ್ಮೆ ನಿಟ್ಟೂರು ಶ್ರೀನಿವಾಸ್ ಅವರಲ್ಲಿ ನಾನು ಕೇಳಿದ್ದೆ ನಿಮ್ಮ ಕಿರಿಯ ವಕೀಲರು ಯಾರು ಉತ್ತಮರು ಎಂದು ಪ್ರಶ್ನಿಸಿದಾಗ ಜಸ್ಟೀಸ್ ಕೆ.ಆರ್, ಗೋಪಿ ವಲ್ಲಭ ಅಯ್ಯಂಗಾರ್ ಎಂದು ಹೇಳಿದ್ದರು. ಹೇಗೆ ಪ್ರಕರಣಗಳಲ್ಲಿ ಹೇಗೆ ವಾದಿಸಬೇಕು. ವಕೀಲರ ನೀತಿ, ಸಿದ್ಧಾಂತಗಳು, ಶಿಸ್ತು ಹೇಗಿರಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ಇತರೆ ವಕೀಲರಿಗೆ ಅವರು ಮಾದರಿಯಾಗಿದ್ದರು ಎಂದರು.
ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರ ಮೊಮ್ಮಗಳು ಮತ್ತು ನಿಮ್ಹಾನ್ಸ್ ನಿರ್ದೇಶಕರಾದ ಡಾ. ಪ್ರತಿಮಾಮೂರ್ತಿ ಮಾತನಾಡಿ, ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ಅವರು ನ್ಯಾಯಾಂಗ ಕ್ಷೇತ್ರದಲ್ಲಿ ಭವ್ಯ ಪರಂಪರೆಯನ್ನು ಹಾಕಿಕೊಟ್ಟಿದ್ದಾರೆ. ಅವರು ಮೌನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ತಪ್ಪು ಮಾಡಿದ್ದರೆ ಅದನ್ನು ಅರ್ಥಮಾಡಿಕೊಂಡು ನಾವೇ ತಿದ್ದುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಹಲವಾರು ಹಿರಿಯ ವಕೀಲರು, ನ್ಯಾಯಾಂಗದ ಗಣ್ಯರ ಜೊತೆ ಸಂವಾದ ನಡೆಸಲು ತಮಗೆ ಸಾಧ್ಯವಾಯಿತು ಎಂದು ಹೇಳಿದರು.
ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಹಿರಿಯ ವಕೀಲ ಉದಯ್ ಹೊಳ್ಳ ಮಾತನಾಡಿ, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮಾಧ್ಯಮದ ಪಾತ್ರ ಅನನ್ಯ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಧ್ಯಮಗಳು ಪ್ರಜಾತಂತ್ರ ರಕ್ಷಣೆಗಾಗಿ ಮಾಡಿದ ಹೋರಾಟ ಮರೆಯಲು ಸಾಧ್ಯವೇ ಇಲ್ಲ ಎಂದರು.
ವಕೀಲರ ವಾಹಿನಿ ಸಂಪಾದಕರು ಮತ್ತು ಪ್ರಕಾಶಕರಾದ ಡಾ.ಡಿ.ಎಂ. ಹೆಗ್ಡೆ ಮಾತನಾಡಿ, ಜಸ್ಟೀಸ್ ಕೆ.ಆರ್. ಗೋಪಿ ವಲ್ಲಭ ಅಯ್ಯಂಗಾರ್ ನ್ಯಾಯಾಂಗ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಜೊತೆಗೆ ಅವರ ತತ್ವ ಸಿದ್ಧಾಂತಗಳನ್ನು ವಕೀಲ ಸಮುದಾಯ ಅನುಸರಿಸುವಂತಾಗಬೇಕು ಎಂದು ನುಡಿದರು.
ವಕೀಲರ ವಾಹಿನಿ ಸ್ಥಾಪಕರಾದ ಅರವಿಂದ್ ನೆಗಲೂರು, ಮುಖ್ಯ ಸಂಪಾದಕ ಎಸ್.ಎನ್. ಪ್ರಶಾಂತ್ ಚಂದ್ರ, ಮತ್ತಿತರರು ಉಪಸ್ಥಿತರಿದ್ದರು.
((((( *ಬಾಕ್ಸ್* )))))
ನನ್ನ ತಂದೆ ಎಚ್.ಕೆ. ಕುಮಾರ ಸ್ವಾಮಿ ಮೂಲತಃ ಸಹಕಾರಿ ಧುರೀಣರು. ಜೊತೆಗೆ ಪತ್ರಕರ್ತರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಾಲ್ಕು ವರ್ಷ ಮೈಸೂರು ಜೈಲಿನಲ್ಲಿದ್ದರು. ಆಗ ಮೂರನೇ ವರ್ಷ ಅವರಿಗೆ ಸ್ವಲ್ಪ ಸ್ವಾತಂತ್ರ್ಯ ದೊರೆತಿತ್ತು. ಮನೆಯಿಂದ ಒಂದು ಹೊತ್ತಿನ ಊಟ ತರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಮನೆಯಿಂದ ಪ್ರತಿದಿನ ಟಿಫಿನ್ ಬಾಕ್ಸ್ ಬರುತ್ತಿದ್ದು. ಆಗ ಈ ಅವಕಾಶವನ್ನು ಬಳಸಿಕೊಂಡು ಸಾಧ್ವಿ ಪತ್ರಿಕೆಗೆ ನಮ್ಮ ತಂದೆ ಪ್ರತಿದಿನ ಲೇಖನ ತಲುಪಿಸುತ್ತಿದ್ದರು. ಇದು ತಿಳಿದ ನಂತರ ಅವರನ್ನು ಮೈಸೂರಿನಿಂದ ಹಾಸನ ಜೈಲಿಗೆ ವರ್ಗಾಯಿಸಿದ್ದರು. ಹಾಸನದಲ್ಲಿ ಅವರಿಗೆ ಹಾರ್ನಳ್ಳಿ ರಾಮಸ್ವಾಮಿ ಜೊತೆಯಾದರು. ತನ್ನ ಕೊನೆಯ ಹಂತದವರೆಗೆ ನನ್ನ ತಂದೆ ಪತ್ರಕರ್ತ ಎನ್ನುವ ಹಣೆಪಟ್ಟಿಯನ್ನು ಅಂಟಿಕೊಂಡಿಸಿದ್ದರು.
– ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟೀಸ್ ಅರವಿಂದ್ ಕುಮಾರ್