ಇತ್ತೀಚಿನ ಸುದ್ದಿ
ಇಂಡಿಯನ್ ಎಂಪೈರ್ ಯುನಿವರ್ಸಿಟಿ: ಪತ್ರಕರ್ತ ಮಂದಾರ ರಾಜೇಶ್ ಭಟ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
17/07/2022, 12:14

ಮಂಗಳೂರು(reporterkarnataka.com):ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಹಾಗೂ ಇಂಡಿಯನ್ ಎಂಪೈರ್ ಯುನಿವರ್ಸಿಟಿ ಪತ್ರಕರ್ತ ಮಂದಾರ ರಾಜೇಶ್ ಭಟ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರ ಪರಿಸರ ಸಂರಕ್ಷಣೆ ಮತ್ತು ಮಾಧ್ಯಮ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ.
ಮಂದಾರ ಮನೆತನದಲ್ಲಿ ಜನಿಸಿದ ಮಂದಾರ ರಾಜೇಶ್ ಭಟ್ಟರು ಕೇಂದ್ರ ಭಾಷಾ ಸಮ್ಮಾನ್ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಥಮ ಪ್ರಶಸ್ತಿ ಪುರಸ್ಕೃತ, ತುಳು ವಾಲ್ಮೀಕಿ, ಮಹಾಕವಿ ಮಂದಾರ ಕೇಶವ ಭಟ್ಟರ ಸಹೋದರರಾದ ಮಂದಾರ ರಾಧಾ-ಮಾಧವ ಭಟ್ಟರ ಪುತ್ರ. ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಮಾಡಿದ ಮಂದಾರ ಕೇಶವ ಭಟ್ಟರು ಕರಾವಳಿ ಮಾತ್ರವಲ್ಲದೆ ನಾಡಿನುದ್ದಗಲಕ್ಕೂ ಬಹು ದೊಡ್ಡ ಹೆಸರು.
ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ರಾಜೇಶ ಭಟ್ಟರು ಸಹಜವಾಗಿ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಈಗಾಗಲೇ ಹಲವಾರು ಸರಕಾರಿ, ಅರೆ ಸರ್ಕಾರಿ ಮತ್ತು ಸ್ವಯಂಸೇವಾ ಸಂಸ್ಥೆಗಳಿಂದ ಗೌರವ ಸನ್ಮಾನ ಪಡೆದಿದ್ದಾರೆ. ಇವರೊಳಗಿನ ಸಾಮಾಜಿಕ ಕಳಕಳಿ ಇವರನ್ನು ಸಮಾಜ ಸೇವೆಗೆ ಪ್ರೇರೇಪಿಸಿದೆ. ಪತ್ರಕರ್ತನಾಗಿ ಸಾಮಾಜಿಕ ತುಡಿತದ ಜತೆಗೆ ಸಮಾಜ ಸೇವೆಯ ಮಿಡಿತ ಇವರಲ್ಲಿ ಸಮ್ಮಿಳಿತವಾಗಿದೆ.
ಕೃಷಿ, ಹೂದೋಟ ನಿರ್ಮಾಣ, ಉದ್ಯಾನವನ, ವನಮಹೋತ್ಸವ ಆಚರಣೆ ಮೂಲಕ ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕಾಗಿ ಭಾರತ ದರ್ಶನ, ದೃಶ್ಯ ಮಾಧ್ಯಮ ನಿರೂಪಕನಾಗಿ ಹಾಗೂ ಪತ್ರಿಕಾ ವರದಿಗಾರರಾಗಿ ರಾಜೇಶ್ ಭಟ್ಟರು ಕಾರ್ಯನಿರ್ವಹಿಸುತ್ತಿದ್ದಾರೆ.
ಬಡವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ಸಹಾಯ, ಬಡ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ, ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಸಾಧಕರ ಕುರಿತು ಪುಸ್ತಕ ಪ್ರಕಟಣೆ, ಉಚಿತ ಹಂಚಿಕೆ ಮಾಡುತ್ತಿದ್ದಾರೆ. ಪ್ರಸ್ತುತ ಕೃಷಿಕನಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜುಲೈ 16, 2022ರಂದು ತಮಿಳುನಾಡಿನ ಹೊಸೂರಿನಲ್ಲಿ ನಡೆದ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ಇದರ ಸ್ಥಾಪಕಾಧ್ಯಕ್ಷ ಡಾ. ಸಿ. ಪೌಲ್ ಇಬನೇಜರ್, ಯುನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್
ಉಪಾಧ್ಯಕ್ಷ ಡಾ. ಕೆ.ಪ್ರಭಾಕರ್ ಗೌರವ ಅತಿಥಿಗಳಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲಾ ನಿವೃತ್ತ ನ್ಯಾಯಾಧೀಶ ಡಾ. ಜೆ. ಹರಿದಾಸ್ MBA,BL, Ph. D(law ), ಸಿ. ತಮಿಳ್ ಸೆಲ್ವಂ B. com., CAIIB,DCA, NCFM. ಡಾ. .ಜಿ. ರವಿ ಚಂದ್ರಿಕಾ Bsc, MA, ಡಾ. ಇಂದ್ರಾಣಿ ರಾಧಾಕೃಷ್ಣನ್ SPMUDA, ಶ್ರೀ ರಾಮಲಿಂಗಯ್ಯ ಸ್ವಾಮೀಜಿ, ಷಣ್ಮುಖ ಗಾಂಧಿ , ಡಾ. ಎ.ಎಮ್. ಆಲಿ SNR, ಡಾ.
ಗುಣವಂತ ಮಂಜು ಅವರ ಸಮಕ್ಷಮದಲ್ಲಿ ಈ ಪ್ರಶಸ್ತಿಯನ್ನು ಮಂದಾರ ರಾಜೇಶ್ ಭಟ್ಟರು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರಿಗೆ ನೀಡಲಾಯಿತು.